ADVERTISEMENT

ಪ್ರತಿಭಟನಾನಿರತ ರೈತರಿಗೆ ನೋವುಂಟು ಮಾಡದಿರಲು ಮೇಘಾಲಯ ರಾಜ್ಯಪಾಲರ ಮನವಿ

ಪಿಟಿಐ
Published 15 ಮಾರ್ಚ್ 2021, 3:25 IST
Last Updated 15 ಮಾರ್ಚ್ 2021, 3:25 IST
ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್
ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್   

ಬಾಗಪತ್: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ನಿಂತ ಮೇಘಾಲಯ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು, ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ರೈತರಿಗೆ ನೋವುಂಟು ಮಾಡದಿರುವಂತೆ ಒತ್ತಾಯಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕೇಂದ್ರವು ಕಾನೂನು ಖಾತರಿ ನೀಡಿದರೆ, ರೈತರು ಪಟ್ಟು ಸಡಿಲಿಸಲಿದ್ದಾರೆ. ರೈತ ಮುಖಂಡ ರಾಕೇಶ್ ಟಿಕಾಯತ್ ಅವರ ಬಂಧನದ ಬಗ್ಗೆ ವದಂತಿಗಳು ಕೇಳಿ ಬಂದಾಗ ಅವರನ್ನು ಬಂಧಿಸುವುದನ್ನು ವಿರೋಧಿಸಿದ್ದೇನೆ ಎಂದು ಮೇಘಾಲಯದ ರಾಜ್ಯಪಾಲರು ಹೇಳಿದ್ದಾರೆ.

ರೈತರ ವಿರುದ್ಧ ಬಲ ಪ್ರಯೋಗವನ್ನು ಬಳಸಬೇಡಿ ಮತ್ತು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ದೆಹಲಿಯಿಂದ ಖಾಲಿ ಕೈಯಿಂದ ಮನೆಗೆ ಕಳುಹಿಸದಂತೆ ಪ್ರಧಾನಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.

ADVERTISEMENT

'ಯಾವುದೇ ಕಾನೂನುಗಳು ರೈತರ ಪರವಾಗಿಲ್ಲ. ರೈತರು ಮತ್ತು ಸೈನಿಕರು ತೃಪ್ತರಾಗಿಲ್ಲದ ದೇಶದಲ್ಲಿ, ಆ ದೇಶವು ಮುಂದೆ ಸಾಗಲು ಸಾಧ್ಯವಿಲ್ಲ. ಆ ದೇಶವನ್ನು ಉಳಿಸಲು ಸಾಧ್ಯವಿಲ್ಲ. ಆದ್ದರಿಂದ, ಸೇನೆ ಮತ್ತು ರೈತರನ್ನು ತೃಪ್ತಿಪಡಿಸಬೇಕು ಎಂದ ಅವರು, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ರೈತರಿಗೆ ನೋವುಂಟು ಮಾಡದಿರಲಿ ಎಂದು ಒತ್ತಾಯಿಸಿದರು.

ರೈತರ ಸ್ಥಿತಿ ಕೆಟ್ಟದ್ದಾಗಿದೆ ಎಂದು ವಿವರಿಸಿದ ಮಲಿಕ್, 'ರೈತರು ದಿನದಿಂದ ದಿನಕ್ಕೆ ಬಡವರಾಗುತ್ತಿದ್ದಾರೆ, ಆದರೆ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವೇತನವು ಪ್ರತಿ ಮೂರು ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ. ಒಬ್ಬ ರೈತ ಬಿತ್ತಿದ್ದು ಅಗ್ಗವಾಗಿದೆ ಮತ್ತು ಅವನು ಖರೀದಿಸುವ ಯಾವುದೇ ವಸ್ತುವಿನ ಬೆಲೆ ದುಬಾರಿಯಾಗುತ್ತಿದೆ' ಎಂದು ಹೇಳಿದರು.

'ಅವರು ಹೇಗೆ ಬಡವರಾಗುತ್ತಿದ್ದಾರೆಂದು ಅವರಿಗೇ ತಿಳಿದಿಲ್ಲ. ರೈತರ 'ಸತ್ಯನಾಶ್' (ಸರ್ವನಾಶ) ಅವರಿಗೆ ತಿಳಿಯದೆಯೇ ನಡೆಯುತ್ತಿದೆ. ಅವರು ಬಿತ್ತನೆ ಮಾಡಲು ಹೋದಾಗ (ಬೆಳೆಗಳಿಗೆ) ಸ್ವಲ್ಪ ಬೆಲೆ ಇರುತ್ತದೆ, ಮತ್ತು ಅದನ್ನು ಕೊಯ್ಯಲು ಹೋದಾಗ ಬೆಲೆ ಸುಮಾರು 300 ರೂ.ಗಳಷ್ಟು ಕಡಿಮೆಯಾಗುತ್ತದೆ' ಎಂದು ಹೇಳಿದರು.

ಹೊಸ ಕೃಷಿ ಕಾನೂನುಗಳ ಪರವಾಗಿ ಮಂಡಿಸಿದ ವಾದಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ ಮಲಿಕ್, 'ರೈತರು ಈಗ ಯಾವುದೇ ಸ್ಥಳದಲ್ಲಿ (ಬೆಳೆಗಳನ್ನು) ಮಾರಾಟ ಮಾಡಬಹುದೆಂದು ಸಾಕಷ್ಟು ಮಾತುಗಳು ಕೇಳಿಬಂದವು. ಇದು 15 ವರ್ಷಗಳ ಹಳೆಯ ಕಾನೂನು. ಇದರ ಹೊರತಾಗಿಯೂ, ಮಥುರಾದ ರೈತನು ಗೋಧಿಯೊಂದಿಗೆ ಪಾಲ್ವಾಲ್‌ಗೆ ಹೋದಾಗ, ಅವನ ಮೇಲೆ ಲಾಠಿಚಾರ್ಜ್ ಮಾಡಲಾಯಿತು. ಸೋನಿಪತ್‌ನಿಂದ ಒಬ್ಬ ರೈತ ನರೇಲಾಕ್ಕೆ ಬಂದಾಗ, ಅವನ ಮೇಲೆಯೂ ಲಾಠಿಚಾರ್ಜ್ ಮಾಡಲಾಯಿತು' ಎಂದು ದೂರಿದರು.

'ರೈತರಲ್ಲಿರುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಲೇಬೇಕಿದೆ. ಇಂದು ರೈತರ ಪರವಾಗಿ ಯಾವುದೇ ಕಾನೂನು ಇಲ್ಲ. ಇದನ್ನು ಸರಿಪಡಿಸಬೇಕಾಗಿದೆ. ರೈತರ ವಿಷಯದಲ್ಲಿ, ಅವರ ಸಮಸ್ಯೆಗಳನ್ನು ಪರಿಹರಿಸಲು ನಾನು ಯಾವುದೇ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ' ಎಂದು ಅವರು ಹೇಳಿದರು.

ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಸಿಖ್ ರೈತರನ್ನು ಉಲ್ಲೇಖಿಸಿದ ಮಲಿಕ್, '300 ವರ್ಷಗಳ ನಂತರವೂ ಸಿಖ್ ಸಮುದಾಯವು ಇದರಿಂದ ಹಿಂದೆ ಸರಿಯುವುದಿಲ್ಲ ಮತ್ತು ಯಾವುದೇ ವಿಷಯಗಳನ್ನು ಮರೆಯುವುದಿಲ್ಲ" ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.