ADVERTISEMENT

ಶ್ರೀನಗರದಲ್ಲಿ ನಾಗರಿಕರ ಹತ್ಯೆ: ಲೆಫ್ಟಿನೆಂಟ್‌ ಗವರ್ನರ್‌ ಮಧ್ಯಪ್ರವೇಶಕ್ಕೆ ಆಗ್ರಹ

ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 13:06 IST
Last Updated 17 ನವೆಂಬರ್ 2021, 13:06 IST
ಉಗ್ರವಾದದ ಹೆಸರಿನಲ್ಲಿ ಅಮಾಯಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡುತ್ತಿವೆ ಎಂದು ಆರೋಪಿಸಿ ಜಮ್ಮುವಿನಲ್ಲಿ ಬುಧವಾರ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಉಗ್ರವಾದದ ಹೆಸರಿನಲ್ಲಿ ಅಮಾಯಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡುತ್ತಿವೆ ಎಂದು ಆರೋಪಿಸಿ ಜಮ್ಮುವಿನಲ್ಲಿ ಬುಧವಾರ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಶ್ರೀನಗರ/ ಜಮ್ಮು: ಶ್ರೀನಗರದ ಹೈದರ್‌ಪೋರಾದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಾಗರಿಕರ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕು ಎಂದು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಒತ್ತಾಯಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ, ಹೈದರಾಪೋರಾದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಇಬ್ಬರು ನಾಗರಿಕರ ಮೃತದೇಹಗಳನ್ನು ಹಸ್ತಾಂತರಿಸಲು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಉಗ್ರವಾದದ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಮಾಯಕರನ್ನು ಕೊಲ್ಲುತ್ತಿದೆ ಎಂದು ಆರೋಪಿಸಿ ಹಾಗೂ ಹತ್ಯೆಯಾದ ನಾಗರಿಕರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಜಮ್ಮುವಿನಲ್ಲಿ ಬುಧವಾರ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ADVERTISEMENT

ನಂತರ ಮಾತನಾಡಿದ ಮೆಹಬೂಬ ಮುಫ್ತಿ, ಹೈದರ್‌ಪೋರಾ ಎನ್‌ಕೌಂಟರ್‌ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಕಾಶ್ಮೀರಿಗಳು ಹಿಂದೆದೂ ಶರಣಾಗಿಲ್ಲ.ಈಗ ಬಂದೂಕು ತೋರಿಸಿದರೆ ಶರಣಾಗುವುದಿಲ್ಲ. ಹತ್ಯೆಯಾದ ನಾಗರಿಕರನ್ನು ಉಗ್ರರ ತಳಮಟ್ಟದ ಕಾರ್ಯಕರ್ತ (ಒಜಿಡಬ್ಲು) ಎಂದು ಬಿಂಬಿಸುವುದು ಫ್ಯಾಷನ್‌ ಆಗಿದೆ. ತಳಮಟ್ಟದ ಕಾರ್ಯಕರ್ತ ಎನ್ನಲು ಪೊಲೀಸರ ಬಳಿ ಯಾವುದೇ ಆಧಾರಗಳಿಲ್ಲ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಹತ್ಯೆಯಾದ ನಾಗರಿಕರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಬೇಕು ಎಂದು ಪತ್ರ ಬರೆದು ಒತ್ತಾಯಿಸಿದ್ದರೂ ಸರ್ಕಾರ ನಿರಾಕರಿಸುತ್ತಿದೆ ಎಂದು ಮೆಹಬೂಬ ಮುಫ್ತಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.