ಶ್ರೀನಗರ: ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತದ ಸೋಲನ್ನು ಸಂಭ್ರಮಿಸಿದ್ದಾರೆ ಮತ್ತು ಆಕ್ಷೇಪಾರ್ಹ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಮೇಲೆ ಏಳು ವಿದ್ಯಾರ್ಥಿಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ)ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರು ಕಾಶ್ಮೀರದ ‘ಶೇರ್–ಎ– ಕಾಶ್ಮೀರ್’ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂದು ಅವರು ತಿಳಿಸಿದ್ದಾರೆ.
‘ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತ ನಂತರ ಕೆಲ ಸಹಪಾಠಿಗಳು ಆಕ್ಷೇಪಾರ್ಹ ಘೋಷಣೆ ಕೂಗುತ್ತಾ, ಕಿರುಕುಳ ನೀಡಿದರು’ ಎಂದು ಕಾಶ್ಮೀರದ ಹೊರಗಿನ ವಿದ್ಯಾರ್ಥಿಯೊಬ್ಬರು ದೂರು ನೀಡಿದ್ದರು. ಇದರನ್ವರ ತನಿಖೆ ನಡೆಸಿದ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಮೆಹಬೂಬಾ ಮುಫ್ತಿ ಕಿಡಿ
ವಿದ್ಯಾರ್ಥಿಗಳನ್ನು ಬಂಧಿಸಿರುವುದಕ್ಕೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕಿಡಿಕಾರಿದ್ದು, ಇದು ಆಘಾತಕಾರಿ ಸಂಗತಿ ಎಂದು ಹೇಳಿದ್ದಾರೆ.
‘ಕೂಡಲೇ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು’ ಎಂದೂ ಆಗ್ರಹಿಸಿದ್ದಾರೆ.
‘ವಿಶ್ವಕಪ್ ವಿಜೇತ ತಂಡದ ಪರವಾಗಿ ಘೋಷಣೆ ಕೂಗುವುದೂ ಕಾಶ್ಮೀರದಲ್ಲಿ ಅಪರಾಧವಾಗಿದೆ. ಯುಎಪಿಎ ಅಂಥ ಕಠಿಣ ಕಾಯ್ದೆಯನ್ನು ಪತ್ರಕರ್ತರು ಮತ್ತು ಹೋರಾಟಗಾರರ ಮೇಲೆ ಹೇರುವುದು ಸಾಮಾನ್ಯವಾಗಿತ್ತು. ಆದರೆ, ಈಗ ವಿದ್ಯಾರ್ಥಿಗಳ ವಿರುದ್ಧವೂ ಈ ಕಠಿಣ ಕಾಯ್ದೆಯನ್ನು ಬಳಸಲಾಗುತ್ತಿದೆ’ ಎಂದು ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.