ನವದೆಹಲಿ: ವಜ್ರದ ಉದ್ಯಮಿ ಮೆಹುಲ್ ಚೋಕ್ಸಿಗೆ ಜಾಮೀನು ನೀಡಲು ಡೊಮಿನಿಕಾ ಹೈಕೋರ್ಟ್ ನಿರಾಕರಿಸಿದೆ. ಆಂಟಿಗುವಾ ಮತ್ತು ಬಾರ್ಬುಡಾದಿಂದ ಪರಾರಿಯಾಗಿದ್ದ ಚೋಕ್ಸಿ, ಕಳೆದ ವಾರ ಡೊಮಿನಿಕಾ ಪೊಲೀಸರ ಕೈಗೆ ಸೆರೆಸಿಕ್ಕಿದ್ದರು. ಡೊಮಿನಿಕಾಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪ ಅವರ ಮೇಲಿದೆ.
ವಿಚಾರಣೆಗೂ ಮೊದಲು ದೇಶವನ್ನು ತೊರೆಯುವ ಸಾಧ್ಯತೆಯಿದೆ (ಫ್ಲೈಟ್ ರಿಸ್ಕ್) ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಲಾಗಿದೆ. ಜೂನ್ 14ರಿಂದ ಕೋರ್ಟ್ ನಿರಂತರ ವಿಚಾರಣೆ ನಡೆಸಲಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನಿರಾಕರಿಸಿದ್ದರಿಂದ ಜೋಕ್ಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
2018ರಲ್ಲಿ ಭಾರತದಿಂದ ಪಲಾಯನ ಮಾಡಿದ್ದ ಚೋಕ್ಸಿ, ಆಂಟಿಗುವಾ ಪೌರತ್ವ ಪಡೆದು ಅಲ್ಲೇ ನೆಲೆಸಿದ್ದರು. ಆದರೆ, ಮೇ 23ರಂದು ಆಂಟಿಗುವಾ ಮತ್ತು ಬಾರ್ಬುಡಾದಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು.
ಉದ್ಯಮಿಯ ಬಂಧನ ಕಾನೂನುಬಾಹಿರ ಎಂದು ಪ್ರತಿಪಾದಿಸಿದ ಚೋಕ್ಸಿ ಪರ ವಕೀಲರು, ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ನಾಗರಿಕರಿಗೆ ಮೀಸಲಾಗಿರುವ ಹಕ್ಕುಗಳನ್ನು ಕಸಿದುಕೊಳ್ಳುವ ಸಲುವಾಗಿ, ಚೋಕ್ಸಿ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಡೊಮಿನಿಕಾಗೆ ಹಸ್ತಾಂತರಿಸಲಾಗಿದೆ ಎಂದು ವಕೀಲರು ಆರೋಪಿಸಿದರು.
ಪೊಲೀಸರು ಆಂಟಿಗುವಾದ ಜಾಲಿ ಹಾರ್ಬರ್‌ನಿಂದ ಚೋಕ್ಸಿಯನ್ನು ಅಪಹರಿಸಿ ದೋಣಿಯಲ್ಲಿ ಡೊಮಿನಿಕಾಗೆ ಕರೆತಂದರು ಎಂದು ವಕೀಲರು ಆರೋಪಿಸಿದ್ದಾರೆ.
ಪ್ರತಿವಾದಿ ಮಾಡಲು ಮನವಿ
ಚೋಕ್ಸಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ತಮ್ಮನ್ನು ಪ್ರತಿವಾದಿ ಮಾಡುವಂತೆ ಡೊಮಿನಿಕಾ ಹೈಕೋರ್ಟ್‌ಗೆ ಸಿಬಿಐ ಮನವಿ ಮಾಡಿದೆ. ಈ ಸಂಬಂಧ ಸಿಬಿಐ ಮತ್ತು ಭಾರತದ ವಿದೇಶಾಂಗ ಸಚಿವಾಲಯಗಳು ಎರಡು ಅಫಿಡವಿಟ್‌ಗಳನ್ನು ಸಲ್ಲಿಸಿವೆ.
ಚೋಕ್ಸಿಯ ಕ್ರಿಮಿನಲ್ ಅಪರಾಧಿತ್ವ, ದೇಶಭ್ರಷ್ಟ ಎಂದು ಘೋಷಣೆಯಾಗಿರುವುದು, ಚೋಕ್ಸಿ ವಿರುದ್ಧ ಬಾಕಿ ಇರುವ ವಾರಂಟ್‌ಗಳು, ರೆಡ್ ಕಾರ್ನರ್ ನೋಟಿಸ್ ಮತ್ತು ಚಾರ್ಜ್‌ಶೀಟ್ ಮಾಹಿತಿಯನ್ನು ಸಿಬಿಐ ತಂಡವು ಡೊಮಿನಿಕಾ ಕೋರ್ಟ್ ಗಮನಕ್ಕೆ ತರಲಿದೆ. ಚೋಕ್ಸಿಯು ಈಗಲೂ ಭಾರತೀಯ ಪ್ರಜೆ ಎಂಬ ವಿಚಾರವನ್ನು ವಿದೇಶಾಂಗ ಸಚಿವಾಲಯ ತಿಳಿಸಲಿದೆ.
ಒಂದುವೇಳೆ ಈ ಅಫಡವಿಟ್‌ಗಳು ಸ್ವೀಕೃತವಾದರೆ, ವಕೀಲ ಹರೀಶ್ ಸಾಳ್ವೆ ಅವರು ಡೊಮಿನಿಕಾದಲ್ಲಿ ಭಾರತದ ಪರವಾಗಿ ವಾದ ಮಾಡಲಿದ್ದಾರೆ.
ಚೋಕ್ಸಿ ಅವರು ತಮ್ಮ ಸಂಬಂಧಿ ನೀರವ್ ಮೋದಿ ಜೊತೆಗೂಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹13 ಸಾವಿರ ಕೋಟಿ ವಂಚನೆ ಎಸಗಿ ಪರಾರಿಯಾಗಿದ್ದರು.
ಲಂಡನ್‌ನಲ್ಲಿ ದೂರು
ಚೋಕ್ಸಿ ಅವರ ಅಪಹರಣ ಮತ್ತು ಚಿತ್ರಹಿಂಸೆ ಕುರಿತು ತನಿಖೆ ನಡೆಸಬೇಕೆಂದು ಕೋರಿ ಲಂಡನ್‌ನಲ್ಲಿರುವ ಅವರ ವಕೀಲ ಮೈಕೆಲ್ ಪೋಲಾಕ್ ಅವರು ಸ್ಕಾಟ್ಲೆಂಡ್ ಯಾರ್ಡ್‌ಗೆ ದೂರು ನೀಡಿದ್ದಾರೆ.
ಚೋಕ್ಸಿ ಅವರನ್ನು ಆಂಟಿಗುವಾದಿಂದ ಡೊಮಿನಿಕಾಗೆ ಕಳುಹಿಸಲಾಗಿದೆ. ಪೌರತ್ವದ ಪ್ರಶ್ನೆ ಬಂದಾಗ ಆಂಟಿಗುವಾದಲ್ಲಿರುವ ಬ್ರಿಟಿಷ್ ಕಾನೂನಿನ ಮೊರೆ ಹೋಗಲು ಕೊನೆಯ ಅವಕಾಶವಿದೆ. ಆದರೆ ಡೊಮಿನಿಕಾದಲ್ಲಿ ಈ ಅವಕಾಶ ಲಭ್ಯವಿಲ್ಲ ಎಂದು ಪೋಲಾಕ್ ಅವರು ತಿಳಿಸಿದ್ದಾರೆ.
‘ಚೋಕ್ಸಿಗೆ ಕಾನೂನಿನ ಪ್ರಕಾರ ಇರುವ ರಕ್ಷಣೆಯನ್ನು ಕೊನೆಗೊಳಿಸಲು ಡೊಮಿನಿಕಾಗೆ ಕಳುಹಿಸಲಾಗಿದೆ. ಚೋಕ್ಸಿಗೆ ಇರುವ ಪೌರತ್ವದ ಹಕ್ಕನ್ನು ಕಸಿದುಕೊಳ್ಳಲು ಪ್ರಧಾನಿ ಯತ್ನಿಸುತ್ತಿದ್ದಾರೆ. ಭಾರತಕ್ಕೆ ಹಸ್ತಾಂತರ ಮಾಡಲು ಉದ್ದೇಶಿಸಿದ್ದಾರೆ’ ಎಂದು ವಕೀಲರು ಆರೋಪಿಸಿದ್ದಾರೆ.
ಭಾರತದ ತಂಡ ವಾಪಸ್
ಚೋಕ್ಸಿಯನ್ನು ಕರೆತರಲು ಡೊಮಿನಿಕಾಗೆ ತೆರಳಿದ್ದ ಭಾರತದ ವಿವಿಧ ತನಿಖಾ ಏಜೆನ್ಸಿಗಳ ಅಧಿಕಾರಿಗಳ ತಂಡ ಜೂನ್ 4ರಂದು ವಾಪಸಾಗಿದೆ. ಚೋಕ್ಸಿ ಅವರ ವಿಚಾರಣೆಯನ್ನು ಡೊಮಿನಿಕಾ ಕೋರ್ಟ್ ಜೂನ್ 11ಕ್ಕೆ ಮುಂದೂಡಿದ್ದರಿಂದ ಅಧಿಕಾರಿಗಳು ಭಾರತಕ್ಕೆ ಮರಳಿದ್ದರು.
ಸಿಬಿಐ ಡಿಐಜಿ ಶಾರದಾ ರಾವುತ್ ನೇತೃತ್ವದ ತಂಡವು ಡೊಮಿನಿಕಾಗೆ ತೆರಳಿತ್ತು. ಈ ತಂಡವು ಒಂದು ವಾರ ಡೊಮಿನಿಕಾದಲ್ಲಿ ಉಳಿದುಕೊಂಡಿತ್ತು. ಆದರೆ ಡೊಮಿನಿಕಾ ಕೋರ್ಟ್‌ನಲ್ಲಿ ಚೋಕ್ಸಿ ವಿಚಾರಣೆಯು ಬಾಕಿ ಇದ್ದಿದ್ದರಿಂದ ತಂಡ ಬರಿಗೈಲಿ ವಾಪಸಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.