ADVERTISEMENT

ಇ.ಡಿ ಪ್ರಕರಣಗಳನ್ನು ರದ್ದುಗೊಳಿಸಲು ಕೋರಿ ಬಾಂಬೆ ಹೈಕೋರ್ಟ್‌ಗೆ ಚೋಕ್ಸಿ ಅರ್ಜಿ

ಪಿಟಿಐ
Published 19 ನವೆಂಬರ್ 2021, 15:38 IST
Last Updated 19 ನವೆಂಬರ್ 2021, 15:38 IST
   

ಮುಂಬೈ: ತನ್ನನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಬೇಕೆಂಬ ಜಾರಿ ನಿರ್ದೇಶನಾಲಯದ (ಇ.ಡಿ) ಕೋರಿಕೆ ಮತ್ತು ತನ್ನ ವಿರುದ್ಧ ಅದು ಆರಂಭಿಸಿರುವ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

₹14,500 ಕೋಟಿ ಮೌಲ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಚೋಕ್ಸಿ ಗುರುವಾರ ಹಿರಿಯ ವಕೀಲ ವಿಜಯ್ ಅಗರ್ವಾಲ್ ಮೂಲಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಚೋಕ್ಸಿಯನ್ನು ಎಫ್‌ಇಒ (ಆರ್ಥಿಕ ಅಪರಾಧ) ಕಾಯಿದೆ–2018ರ ಅಡಿಯಲ್ಲಿ ಪಲಾಯನಗೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಕೋರಿ ಇ.ಡಿ 2019ರಲ್ಲಿ ಪಿಎಂಎಲ್‌ಎ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.

ಕಾಯಿದೆಯ ಪ್ರಕಾರ, ₹100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಹಗರಣದಲ್ಲಿ ಭಾಗಿಯಾದ ಅಪರಾಧಕ್ಕಾಗಿ ವ್ಯಕ್ತಿಯೊಬ್ಬನ ವಿರುದ್ಧ ವಾರಂಟ್ ಹೊರಡಿಸಿದ್ದರೆ, ಆ ವ್ಯಕ್ತಿಯು ದೇಶವನ್ನು ತೊರೆದಿದ್ದರೆ ಮತ್ತು ಹಿಂದಿರುಗಲು ನಿರಾಕರಿಸಿದರೆ ಆತನನ್ನು ಪಲಾಯನಗೊಂಡಿರುವ ಆರ್ಥಿಕ ಅಪರಾಧಿ ಎಂದು ಪರಿಗಣಿಸಲಾಗುತ್ತದೆ.

ADVERTISEMENT

‘ತನ್ನನ್ನು ಪಲಾಯನಗೊಂಡಿರುವ ಅಪರಾಧಿ ಎಂದು ಪರಿಗಣಿಸಬಾರದು ಎಂದು ಚೋಕ್ಸಿ ಕೋರ್ಟ್‌ ಎದುರು ಮನವಿ ಮಾಡಿದ್ದಾರೆ. ‘ಕ್ರಿಮಿನಲ್ ಮೊಕದ್ದಮೆಯಿಂದ ರಕ್ಷಣೆ ಪಡೆಯಲು ನಾನು ಭಾರತವನ್ನು ತೊರೆದಿಲ್ಲ. ನನ್ನ ವಿರುದ್ಧ ಯಾವುದೇ ಎಫ್‌ಐಆರ್‌ಗಳು ದಾಖಲಾಗುವ ಮೊದಲೇ ದೇಶದಿಂದ ಹೊರ ಬಂದಿದ್ದೇನೆ. ಹೀಗಾಗಿ ನನ್ನನ್ನು ಪಲಾಯನಗೊಂಡ ಆರ್ಥಿಕ ಅಪರಾಧಿ ಎಂದು ಪರಿಗಣಿಸಬಾರದು,’ ಎಂದು ಚೋಕ್ಸಿ ಅರ್ಜಿಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.