ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ₹13,000 ಕೋಟಿ ಹಗರಣದಲ್ಲಿ ಬೇಕಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯ ಹೆಸರನ್ನು ಇಂಟರ್‌ಪೋಲ್ ರೆಡ್ ನೋಟಿಸ್‌ನ ಡೇಟಾಬೇಸ್‌ನಿಂದ ತೆಗೆದುಹಾಕಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಪಟ್ಟಿಯಿಂದ ತಮ್ಮ ಹೆಸರು ತೆಗೆದು ಹಾಕುವಂತೆ ಚೋಕ್ಸಿ ಲಿಯಾನ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಅವರ ಹೆಸರನ್ನು ಡೇಟಾಬೇಸ್‌ನಿಂದ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸಿಲ್ಲ.
ರೆಡ್ ನೋಟಿಸ್ ಡೇಟಾಬೇಸ್‌ನಿಂದ ಚೋಕ್ಸಿ ಹೆಸರು ತೆಗೆದು ಹಾಕಿರುವುದು ಅವರು ಆಂಟಿಗುವಾದಲ್ಲಿ ತಂಗಿದ್ದಾಗ ಅಪಹರಿಸಲಾಗಿತ್ತು ಎಂಬ ಆರೋಪವನ್ನು ಬಲಪಡಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ, ತನ್ನನ್ನು ಭಾರತೀಯ ಏಜೆನ್ಸಿಗಳು ಅಪಹರಿಸಿವೆ ಎಂದು ಹೇಳಿಕೊಂಡಿದ್ದರು. ಆದರೆ ಸರ್ಕಾರವು ಆ ಆರೋಪವನ್ನು ತಳ್ಳಿ ಹಾಕಿತ್ತು.
ರೆಡ್ ನೋಟಿಸ್ ಎಂಬುದು 195 ದೇಶಗಳ ಸದಸ್ಯತ್ವ ಹೊಂದಿರುವ ಇಂಟರ್‌ಪೋಲ್‌ನಿಂದ ಹಸ್ತಾಂತರ, ಶರಣಾಗತಿ ಅಥವಾ ಅಂತಹುದೇ ಕಾನೂನು ಕ್ರಮ ಬಾಕಿ ಇರುವ ವ್ಯಕ್ತಿಯನ್ನು ಪತ್ತೆ ಮಾಡಲು ಮತ್ತು ತಾತ್ಕಾಲಿಕವಾಗಿ ಬಂಧಿಸಲು ನೀಡುವ ವಿಶ್ವದ ಅತ್ಯುನ್ನತ ಕಾನೂನು ಎಚ್ಚರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.