ADVERTISEMENT

ಮೆಹುಲ್‌ ಚೋಕ್ಸಿ ಹಸ್ತಾಂತರಕ್ಕೆ ತಡೆ ನೀಡಿದ ಡೊಮಿನಿಕಾ ಕೋರ್ಟ್‌

ಪಿಟಿಐ
Published 28 ಮೇ 2021, 2:54 IST
Last Updated 28 ಮೇ 2021, 2:54 IST
ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ
ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ    

ನವದೆಹಲಿ: ಡೊಮಿನಿಕಾದಲ್ಲಿ ಬಂಧನಕ್ಕೊಳಗಾದ ವಜ್ರದ ವ್ಯಾಪಾರಿ ಮೆಹುಲ್‌ ಚೋಕ್ಸಿ ಅವರಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನೀಡದಿರುವುದಕ್ಕೆ ಅವರ ಪರ ವಕೀಲರು, ಡೊಮಿನಿಕಾ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ನ್ಯಾಯಾಲಯ ಚೋಕ್ಸಿ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿದೆ.

'ಕಾನೂನು ತಂಡವು ಡೊಮಿನಿಕಾದಲ್ಲಿ ಮೆಹುಲ್ ಚೋಕ್ಸಿಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದೆ ಮತ್ತು ಮೆಹುಲ್ ಚೋಕ್ಸಿಗೆ ಕಾನೂನು ಸಲಹೆ ಪಡೆಯಲು ಅವಕಾಶ ನಿರಾಕರಿಸಲಾಗಿದೆ, ಇದು ಸಾಂವಿಧಾನಿಕ ಹಕ್ಕುಗಳ ಅಭಾವವನ್ನು ಎತ್ತಿ ತೋರಿಸಿದೆ' ಎಂದು ಅವರ ಕಾನೂನು ಸಲಹೆಗಾರ ವಿಜಯ್ ಅಗರ್ವಾಲ್ ಪಿಟಿಐಗೆ ತಿಳಿಸಿದ್ದಾರೆ.

ಹಸ್ತಾಂತರಕ್ಕೆ ತಡೆ ನೀಡಿದ ಡೊಮಿನಿಕಾ ಕೋರ್ಟ್‌

ADVERTISEMENT

ಡೊಮಿನಿಕಾದ ಚೋಕ್ಸಿ ಪರ ಕಾನೂನು ತಂಡವು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ ನಂತರ ಮೆಹುಲ್ ಚೋಕ್ಸಿಯ ಹಸ್ತಾಂತರ ಪ್ರಕ್ರಿಯೆಗೆ ಡೊಮಿನಿಕಾ ನ್ಯಾಯಾಲಯ ತಡೆ ನೀಡಿದೆ. ಈ ವಿಷಯವು ಮೇ 28 ರಂದು ಸ್ಥಳೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಮತ್ತೆ ವಿಚಾರಣೆಗೆ ಬರುವ ನಿರೀಕ್ಷೆಯಿದೆ.

₹13,500 ಕೋಟಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾರತದಿಂದ ತಲೆಮರೆಸಿಕೊಂಡಿದ್ದ ಚೋಕ್ಸಿ, ಭಾನುವಾರ ಆಂಟಿಗುವಾ ಮತ್ತು ಬಾರ್ಬುಡಾದಿಂದ ಕಾಣೆಯಾಗಿದ್ದರು. ಅಲ್ಲಿಂದ ಸುಮಾರು 100 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಡೊಮಿನಿಕಾದಲ್ಲಿ ಅಕ್ರಮ ಪ್ರವೇಶದ ಕಾರಣದಿಂದ ಅವರನ್ನು ಬಂಧಿಸಿರುವ ಕುರಿತು ಅಗರ್ವಾಲ್ ಅನುಮಾನ ವ್ಯಕ್ತಪಡಿಸಿದ್ದರು.

ಹಲವು ಪ್ರಯತ್ನಗಳ ಬಳಿಕ ಚೋಕ್ಸಿ ಜೊತೆಗೆ ಚುಟುಕು ಮಾತುಕತೆಗೆ ಅವಕಾಶ ಸಿಕ್ಕಿದ್ದನ್ನು ಡೊಮಿನಿಕಾದ ಅವರ ವಕೀಲ ವೇಯ್ನ್ ಮಾರ್ಷ್ ಅವರು ರೇಡಿಯೊ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. 'ನನ್ನನ್ನು ಆಂಟಿಗುವಾ ಮತ್ತು ಬಾರ್ಬುಡಾದ ಜಾಲಿ ಹಾರ್ಬರ್‌ನಲ್ಲಿ ಭಾರತೀಯರಂತೆ ಕಾಣುವ ವ್ಯಕ್ತಿಗಳು ಮತ್ತು ಆಂಟಿಗುವಾದ ಪೊಲೀಸರು ಕರೆದುಕೊಂಡು ಹೋಗಿದ್ದರು, ನಂತರ ಹಡಗಿನಲ್ಲಿ ಕೂರಿಸಿದ್ದರು' ಎಂದು ಚೋಕ್ಸಿ ತಿಳಿಸಿರುವುದಾಗಿ ಹೇಳಿದ್ದಾರೆ.

ಕಣ್ಣುಗಳು ಊದಿಕೊಂಡು ಮತ್ತು ತನ್ನ ಜೀವಕ್ಕಾಗಿ ಹೆದರುತ್ತಿದ್ದ ಚೋಕ್ಸಿಯ ದೇಹದ ಮೇಲೆ ಗಾಯದ ಗುರುತುಗಳನ್ನು ನೋಡಿದ್ದೇನೆ. ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾದ ಪ್ರಜೆಯಾಗಿದ್ದಾರೆ. ಭಾರತಕ್ಕೆ ವಾಪಸ್ ಕಳುಹಿಸಲು ಅವರು ಭಾರತದ ಪ್ರಜೆಯಲ್ಲ ಎಂದು ಮಾರ್ಷ್ ಹೇಳಿದ್ದಾರೆ.

ಡೊಮಿನಿಕಾದಲ್ಲಿ ಚೋಕ್ಸಿಯ ನಿಗೂಢ ಕಣ್ಮರೆ ಮತ್ತು ಬಂಧನದ ಸಂಪೂರ್ಣ ಪ್ರಸಂಗವೇ 'ಅನುಮಾನಾಸ್ಪದ'ವಾಗಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.

'ಆಂಟಿಗುವಾ ಮತ್ತು ಬಾರ್ಬುಡಾ ಹಾಗೂ ಡೊಮಿನಿಕಾದಲ್ಲಿನ ಚೋಕ್ಸಿ ಪರ ವಕೀಲರು ಅವರ ಸಾಂವಿಧಾನಿಕ ಹಕ್ಕುಗಳ ಪ್ರಕಾರ ಚೋಕ್ಸಿಯೊಂದಿಗೆ ಕಾನೂನು ಸಂದರ್ಶನ ನಡೆಸಲು ಪ್ರಯತ್ನಿಸಿದ್ದರು. ಆದರೆ, ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಹೆಚ್ಚಿನ ಪ್ರಯತ್ನದ ನಂತರ ಅವರು ಚೋಕ್ಸಿಯೊಂದಿಗೆ ಎರಡು ನಿಮಿಷ ಮಾತನಾಡಲು ಸಾಧ್ಯವಾಯಿತು. ಕಣ್ಣು ತೆರೆಯುವಷ್ಟರಲ್ಲಿ ಆಗಿಹೋದ ಭಯಾನಕ ಅನುಭವವನ್ನು ಚೋಕ್ಸಿ ವಿವರಿಸಿದರು ಮತ್ತು ಅವರು ಆಂಟಿಗುವಾದಿಂದ ಸ್ವಯಂಪ್ರೇರಣೆಯಿಂದ ಎಲ್ಲಿಗೂ ಹೋಗುತ್ತಿರಲಿಲ್ಲ ಎಂಬ ನನ್ನ ನಿಲುವನ್ನು ಸಮರ್ಥಿಸುತ್ತದೆ' ಎಂದು ಅಗರ್ವಾಲ್ ಹೇಳಿದ್ದಾರೆ.

ಆಂಟಿಗುವಾದಿಂದ ಚೋಕ್ಸಿಯನ್ನು ಕರೆದೊಯ್ಯಲ್ಪಟ್ಟ ನಂತರ ಅವರನ್ನು ಎಲ್ಲೋ ಇರಿಸಲಾಗಿತ್ತು ಮತ್ತು ನಂತರ ಸೋಮವಾರ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಂದಿನಿಂದಲೂ ಅವರು ಅಲ್ಲಿಯೇ ಇದ್ದಾರೆ. ಆದರೆ ಜಗತ್ತಿಗೆ ಈ ಸುದ್ದಿ ಬುಧವಾರ ಮಾತ್ರ ತಿಳಿಯಿತು. ಅವರ ದೇಹದಲ್ಲಿ ಗಾಯದ ಗುರುತುಗಳಿವೆ ಎಂದು ಅಗರ್ವಾಲ್ ತಿಳಿಸಿದ್ದಾರೆ.

'ಈ ಘಟನೆಯೇ ಅನುಮಾನಾಸ್ಪದವಾಗಿದೆ ಮತ್ತು ಆತನನ್ನು ಬೇರೆ ದೇಶಕ್ಕೆ ಕರೆದೊಯ್ಯುವ ತಂತ್ರವಿರಬಹುದೆಂದು ನಾನು ಊಹಿಸುತ್ತೇನೆ, ಆದ್ದರಿಂದಾಗಿ ಆತನನ್ನು ಭಾರತಕ್ಕೆ ವಾಪಸ್ ಕಳುಹಿಸುವ ಸಾಧ್ಯತೆಗಳಿವೆ. ಈ ಹಿಂದೆ ಯಾವ ಶಕ್ತಿಗಳು ಕಾರ್ಯನಿರ್ವಹಿಸುತ್ತಿವೆ ಎಂಬುದು ನನಗೆ ತಿಳಿದಿಲ್ಲ. ಸಮಯವೇ ಇದಕ್ಕೆ ಉತ್ತರ ನೀಡಲಿದೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.