ADVERTISEMENT

Manipur Violence | ಕುಕಿಗಳಿಗೆ ಶಸ್ತ್ರಾಸ್ತ್ರ ತಯಾರಿಕೆ ಕಲಿಸಿದ ಯುದ್ಧದ ಅನುಭವ

ಸುಮೀರ್‌ ಕರ್ಮಾಕರ್‌
Published 6 ಅಕ್ಟೋಬರ್ 2024, 23:30 IST
Last Updated 6 ಅಕ್ಟೋಬರ್ 2024, 23:30 IST
<div class="paragraphs"><p>ಚುರಾಚಾಂದ್‌ಪುರ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾದ ಪಂಪಿ ಹಾಗೂ ಇತರ ಶಸ್ತ್ರಾಸ್ತ್ರಗಳು. </p></div>

ಚುರಾಚಾಂದ್‌ಪುರ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾದ ಪಂಪಿ ಹಾಗೂ ಇತರ ಶಸ್ತ್ರಾಸ್ತ್ರಗಳು.

   

–ಚಿತ್ರ: ಅಸ್ಸಾಂ ರೈಫಲ್ಸ್

ಚುರಾಚಾಂದ್‌ಪುರ/ಗುವಾಹಟಿ: ಮೈತೇಯಿ ಸಮುದಾಯದ ಪ್ರಾಬಲ್ಯ ವಿರುವ ಬಿಷ್ಣುಪುರ ಕಡೆಗೆ ಒಂದು ಸುತ್ತಿನ ತುಪಾಕಿಯ ಗುರಿ ಇರಿಸಿದ್ದ 21 ವರ್ಷ ವಯಸ್ಸಿನ ಆಲ್ಬರ್ಟ್, ಕುಕಿ ಸಮುದಾಯದ ಪ್ರಾಬಲ್ಯವಿರುವ ಚುರಾಚಾಂದ್‌ಪುರ ಜಿಲ್ಲೆಯ ಮೊಯಿವಾಂ ಗ್ರಾಮದಲ್ಲಿನ ಒಂದು ಬಂಕರ್‌ನ ಒಳಗೆ ಬಹಳ ವಿಶ್ವಾಸದಿಂದ ಕುಳಿತಿದ್ದರು.

ADVERTISEMENT

‘ಮೈತೇಯಿ ಸಮುದಾಯದ ದುಷ್ಕರ್ಮಿಗಳು’ ಬಳಸುತ್ತಿದ್ದಾರೆ ಎನ್ನಲಾದ ಸ್ವಯಂಚಾಲಿತ ಶಸ್ತ್ರಾಸ್ತ್ರ
ಗಳಿಗೆ ಹೋಲಿಸಿದರೆ ಈ ತುಪಾಕಿ ನಗಣ್ಯವಾಗಿದ್ದರೂ, ತಡೆಗೋಡೆಯೊಂದರ ಹಿಂದೆ ಇರಿಸಿದ್ದ ‘ಪಂಪಿ’ ಹೆಸರಿನ ಫಿರಂಗಿಯ ಕಾರಣದಿಂದಾಗಿ ಕುಕಿ ‘ಗ್ರಾಮ ಸ್ವಯಂಸೇವಕ’ರಲ್ಲಿ ವಿಶ್ವಾಸ ಮೂಡಿತ್ತು. 

ಮೈತೇಯಿಗಳನ್ನು ದೂರ ಓಡಿಸುವಲ್ಲಿ ಪಂಪಿಗಳು ಬಹಳ ನೆರವಿಗೆ ಬಂದಿವೆ ಎಂದು ಆಲ್ಬರ್ಟ್ ಹೇಳಿದರು. 12ನೇ ತರಗತಿವರೆಗೆ ಓದಿರುವ ಕುಕಿ ಯುವಕ ಆಲ್ಬರ್ಟ್, ಕಳೆದ ವರ್ಷದ ಮೇ ತಿಂಗಳಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಸಂಘರ್ಷ ಆರಂಭವಾದ ನಂತರದಲ್ಲಿ ತಮ್ಮ ಹಳ್ಳಿಯನ್ನು ರಕ್ಷಿಸಲು ಶಸ್ತ್ರಾಸ್ತ್ರ ಕೈಗೆತ್ತಿಕೊಂಡಿದ್ದಾರೆ. ‘ಕೆಲವು ಪಂಪಿಗಳು ಮೂರು ಕಿಲೊ ಮೀಟರ್‌ವರೆಗೂ ದಾಳಿ ನಡೆಸಬಲ್ಲವು, ಭಾರಿ ಪ್ರಮಾಣದಲ್ಲಿ ಹಾನಿ ಉಂಟುಮಾಡಬಲ್ಲವು’ ಎಂದು ಅವರು ಹೇಳಿದರು.

ಗನ್‌ಪೌಡರ್ ಮತ್ತು ಸ್ಫೋಟಕಗಳನ್ನು ತುಂಬಿಸಿದ ಕಬ್ಬಿಣದ ಕೊಳವೆಗಳನ್ನು ಬಳಸಿ ಪಂಪಿಗಳನ್ನು ಸಿದ್ಧಪಡಿಸಲಾಗುತ್ತದೆ. ಅದರಲ್ಲಿ ಬಳಕೆ ಮಾಡಿರುವ ಗನ್‌ಪೌಡರ್‌ನ ಗುಣಮಟ್ಟ ಹಾಗೂ ಪ್ರಮಾಣವನ್ನು ಆಧರಿಸಿ ಪಂಪಿಗಳ ಕಾರ್ಯಕ್ಷಮತೆ ತೀರ್ಮಾನವಾಗುತ್ತದೆ ಎಂದು ಕುಕಿ ಸಮುದಾಯದವರ ಪರಮೋಚ್ಛ ಸಂಘಟನೆಯಾದ ಕುಕಿ ಇನ್‌ಪಿನ ಪ್ರಚಾರ ಕಾರ್ಯದರ್ಶಿ ಜಂಘಾಲುನ್ ಹಾವೊಕಿಪ್ ಅವರು ಈಚೆಗೆ ‘ಪ್ರಜಾವಾಣಿ’ ಬಳಿ ಹೇಳಿದ್ದರು.

‘ನಮ್ಮಲ್ಲಿ ಬೇರೆ ಬೇರೆ ಬಗೆಯ ಪಂಪಿಗಳು ಇವೆ. ನಿರಂತರವಾಗಿ ದಾಳಿ ನಡೆಸಲು ಸಾಧ್ಯವಾಗುವ ಪಂಪಿಗಳೂ ನಮ್ಮಲ್ಲಿ ಇವೆ. ಇದನ್ನೇ ಮೈತೇಯಿ ಕಡೆಯವರು ರಾಕೆಟ್‌ ಎನ್ನುತ್ತಾರೆ’ ಎಂದು ಅವರು ತಿಳಿಸಿದರು. ಆದರೆ ತಾವು ಡ್ರೋನ್ ಮತ್ತು ರಾಕೆಟ್ ಬಳಸಿಲ್ಲ ಎಂದು ತಿಳಿಸಿದರು.

ಕುಕಿ ಮತ್ತು ಮೈತೇಯಿ ಸಮುದಾಯದ ಪ್ರಾಬಲ್ಯವಿರುವ ಪ್ರದೇಶಗಳನ್ನು ಪ್ರತ್ಯೇಕಿಸುವ ಬಫರ್ ವಲಯದಲ್ಲಿನ ಬಂಕರ್‌ಗಳನ್ನು ಗ್ರಾಮ ಸ್ವಯಂಸೇವಕರು ಕಾಯುತ್ತಿರುತ್ತಾರೆ. ಇಲ್ಲಿ ಪಂಪಿಗಳನ್ನು ಇರಿಸಲಾಗಿದೆ. ತಮ್ಮ ಗ್ರಾಮಗಳನ್ನು ರಕ್ಷಿಸಿಕೊಳ್ಳಲು ನೇಮಿಸಿರುವ ಶಸ್ತ್ರಸಜ್ಜಿತ ವ್ಯಕ್ತಿಗಳನ್ನು
ಎರಡೂ ಸಮುದಾಯದವರು ಗ್ರಾಮ ಸ್ವಯಂಸೇವಕರು ಎಂದು ಕರೆಯುತ್ತಿದ್ದಾರೆ.

ಮಣಿಪುರದಲ್ಲಿನ ಸಂಘರ್ಷಕ್ಕೆ ಕೊನೆ ಕಾಣುತ್ತಿಲ್ಲವಾದ ಕಾರಣ ಕುಕಿ ಸಮುದಾಯದವರು ಪಿಸ್ತೂಲು, ರೈಫಲ್‌ಗಳು, ಗ್ರನೇಡ್‌ಗಳನ್ನು ಕೂಡ ಸಿದ್ಧಪಡಿಸುತ್ತಿದ್ದಾರೆ. ‘ಕುಕಿ ಸಮುದಾಯದವರು ಇಂತಹ ಶಸ್ತ್ರಾಸ್ತ್ರಗಳನ್ನು ಮಾಡುವುದನ್ನು ವ್ಯಾಪಾರವನ್ನಾಗಿಸಿಕೊಂಡಿದ್ದಾರೆ. ಕಳೆದ ವರ್ಷ ಸಂಘರ್ಷ ಆರಂಭವಾಗುವವರೆಗೆ, ಅವರು ಇಂಥವುಗಳನ್ನು ಮೈತೇಯಿ ಸಮುದಾಯದವರಿಗೂ ಪೂರೈಸುತ್ತಿದ್ದರು. ಈಗ ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ, ಮೈತೇಯಿ ಸಮುದಾಯದವರ ವಿರುದ್ಧ ಬಳಸುವುದಕ್ಕೆ ಸಿದ್ಧಪಡಿಸುತ್ತಿದ್ದಾರೆ’ ಎಂದು ಅಸ್ಸಾಂ ರೈಫಲ್ಸ್‌ನ ಅಧಿಕಾರಿಯೊಬ್ಬರು ಹೇಳಿದರು.

ಆದರೆ ಕುಕಿ ಸಮುದಾಯದವರಿಂದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಇಂತಹ ಶಸ್ತ್ರಾಸ್ತ್ರಗಳನ್ನು ಯಾರು ಪೂರೈಸುತ್ತಾರೆ ಎಂಬ ಪ್ರಶ್ನೆಗೆ ಹಾವೊಕಿಪ್‌ ಅವರು, ‘ಇಂಥವುಗಳನ್ನು ಮಾಡುವುದು ಹೇಗೆ ಎಂಬುದು ನಮ್ಮ ಗ್ರಾಮಸ್ಥರಲ್ಲಿ ಹಲವರಿಗೆ ಈಗ ಗೊತ್ತಿದೆ. ನಮ್ಮ ಹಿರಿಯರು, ಪೂರ್ವಿಕರು 1917ರಿಂದ 1919ರವರೆಗೆ ನಡೆದ ಆಂಗ್ಲೊ–ಕುಕಿ ಯುದ್ಧದಲ್ಲಿ ಬಳಸಲು ಇಂಥವುಗಳನ್ನು ಸಿದ್ಧಪಡಿಸಲು ಕಲಿತಿದ್ದರು. ಅವರಿಂದ ನಾವು ಇದನ್ನು ಕಲಿತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.