ನವದೆಹಲಿ: ‘ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ನಡೆಸಲಾಗುತ್ತಿರುವ ‘ಹ್ಯಾಪಿನೆಸ್ ಕ್ಲಾಸ್’ ಶಿಕ್ಷಣ ತಜ್ಞರಿಗೆ ಆರೋಗ್ಯಕಾರಿ ಮತ್ತು ಗುಣಾತ್ಮಕ ಮಾದರಿಯಾಗಿದೆ’ ಎಂದು ಅಮೆರಿಕದ ಪ್ರಥಮ ಮಹಿಳೆ ಮೆಲೇನಿಯಾ ಟ್ರಂಪ್ ಅವರು ಪ್ರಶಂಸಿಸಿದರು.
ದಕ್ಷಿಣ ದೆಹಲಿಯ ಮೋತಿಬಾಗ್‌ನಲ್ಲಿರುವ ಸರ್ವೋದಯ ಸಹಶಿಕ್ಷಣ ಹಿರಿಯ ಮಾಧ್ಯಮಿಕ ಶಾಲೆಗೆ ಮೆಲೇನಿಯಾ ಅವರು ಮಂಗಳವಾರ ಭೇಟಿ ನೀಡಿದರು. ಸಾಂಪ್ರದಾಯಿಕ ಉಡುಪು ಧರಿಸಿ ಸಿದ್ಧರಾಗಿದ್ದ ವಿದ್ಯಾರ್ಥಿಗಳು, ಮೆಲೇನಿಯಾ ಅವರ ಹಣೆಗೆ ಕೆಂಪು ತಿಲಕ ಇರಿಸಿ, ಚೆಂಡು ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಬಳಿಕ ಅವರು ಮಕ್ಕಳ ಚಟುವಟಿಕೆಗಳನ್ನು ವೀಕ್ಷಿಸಿ ಅವರೊಂದಿಗೆ ಬೆರೆತರು.
ಸರ್ಕಾರಿ ಶಾಲೆಗಳಲ್ಲಿ 45 ನಿಮಿಷಗಳ ‘ಹ್ಯಾಪಿನೆಸ್ ಕ್ಲಾಸ್’ನಲ್ಲಿ ಮಕ್ಕಳಿಗೆ ಧ್ಯಾನ, ಯೋಗ ಸೇರಿದಂತೆ ಪಠ್ಯೇತರ ಚಟುವಟಿಕೆಗಳನ್ನು ಕಲಿಸಲಾಗುತ್ತದೆ. ಇದರ ಅಂಗವಾಗಿ ಮಕ್ಕಳು ಚಿತ್ರ ಬಿಡಿಸುವುದು, ನೃತ್ಯ, ಕಥೆ ಓದುವುದು, ಯೋಗ ಮಾಡುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ಪ್ರದರ್ಶಿಸಿದರು.
‘ಇಲ್ಲಿ ಮಕ್ಕಳು ತಮ್ಮ ಸ್ನೇಹಿತರಿಗೆ ಕಥೆ ಹೇಳುವುದು, ಓದುವುದು, ಪ್ರಕೃತಿಯೊಂದಿಗೆ ಬೆರೆಯುವ ಮೂಲಕ ತಮ್ಮ ಶಾಲಾ ದಿನಚರಿ ಆರಂಭಿಸುತ್ತಾರೆ. ಇದು ಸ್ಫೂರ್ತಿದಾಯಕವಾದದು. ನಾವೆಲ್ಲರೂ ಇದಕ್ಕಿಂತ ಉತ್ತಮ ರೀತಿಯಲ್ಲಿ ದಿನವನ್ನು ಆರಂಭಿಸಲು ಸಾಧ್ಯವಿಲ್ಲ ಎನಿಸುತ್ತದೆ’ ಎಂದು ಮೆಲೇನಿಯಾ ಅವರು ‘ಹ್ಯಾಪಿನೆಸ್ ಕ್ಲಾಸ್’ ಅನ್ನು ಬಣ್ಣಿಸಿದರು.
ಮೆಲೇನಿಯಾ ಅವರನ್ನು ಸ್ವಾಗತಿಸುವ ಸಲುವಾಗಿ ಶಾಲೆಯ ಹಲವೆಡೆ ಹೂವಿನ ರಂಗೋಲಿಗಳನ್ನು ಹಾಕಲಾಗಿತ್ತು.
‘ಬಿ ಬೆಸ್ಟ್’ ಜತೆ ಹೋಲಿಕೆ
‘ಹ್ಯಾಪಿನೆಸ್ ಕ್ಲಾಸ್’ ಅನ್ನು ಅಮೆರಿಕದಲ್ಲಿ ತಾವು ನಡೆಸುತ್ತಿರುವ ‘ಬಿ ಬೆಸ್ಟ್’ ಅಭಿಯಾನದ ಜತೆ ಹೋಲಿಸಿದ ಮೆಲೇನಿಯಾ ಅವರು, ‘ಅಮೆರಿಕದಲ್ಲಿ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಇದೇ ಮಾದರಿಯ ಚಟುವಟಿಕೆಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ’ ಎಂದರು.
ಮಾದಕದ್ರವ್ಯಗಳ ಅಪಾಯ, ಅಂತರ್ಜಾಲ ಸುರಕ್ಷತೆಯ ಪ್ರಾಮುಖ್ಯ ಹಾಗೂ ಮಕ್ಕಳ ಸಮಗ್ರ ಅಭಿವೃದ್ಧಿ ‘ಬಿ ಬೆಸ್ಟ್’ನ ಮೂರು ಆಧಾರಸ್ತಂಭವಾದ ಅಂಶಗಳು ಎಂದು ಮೆಲೇನಿಯಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.