ಅಹಮದಾಬಾದ್: ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಮತದಾನ ಗುರುವಾರ ನಡೆದಿದೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕ ಸುರೇಶ್ ಪನ್ಸುರಿಯಾ ಅವರ ಅವಿಭಕ್ತ ಕುಟುಂಬದ 60 ಮಂದಿ ಸದಸ್ಯರು ಮೆರವಣಿಗೆಯಲ್ಲಿ ಬಂದು ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.
ಅಮ್ರೇಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಅವರ ಕುಟುಂಬದಲ್ಲಿ ಒಟ್ಟು 60 ಜನರು ವಾಸವಾಗಿದ್ದರೆ. ಉದ್ಯೋಗ ಮತ್ತು ಇತರ ಕಾರಣಗಳಿಂದ ದೂರ ದೂರ ಇದ್ದರೂ, ಮತಚಲಾಯಿಸಲು ಎಲ್ಲರೂ ಬಂದು ಒಟ್ಟು ಸೇರಿದ್ದಾರೆ.
ಅದರಲ್ಲೂ, ಮನೆಯಿಂದ ಮತಗಟ್ಟೆಗೆ, ಬ್ಯಾಂಡ್ ಸಹಿತ ಎಲ್ಲರೂ ಜತೆಯಾಗಿ ತೆರಳಿದ್ದಾರೆ. ಜತೆಗೆ, ಡ್ರೆಸ್ ಕೋಡ್ ಸಹಿತ ಅವರು ಬಂದಿದ್ದು, ಎಲ್ಲರ ಗಮನ ಸೆಳೆದಿದೆ. ಸುರೇಶ್ ಕುಟುಂಬದಲ್ಲಿ ಈ ಬಾರಿ ನಾಲ್ವರು ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ.
ಮತದಾನದ ಮಹತ್ವ ಮತ್ತು ಕುಟುಂಬದ ವಿಶೇಷತೆಯನ್ನು ಸಾರಲು ಈ ಚುನಾವಣೆಯ ಅವಕಾಶವನ್ನು ಬಳಸಿಕೊಂಡಿದ್ದೇವೆ ಎಂದು ಸುರೇಶ್ ಹೇಳಿದ್ದಾರೆ.
ಏಕಕಾಲಕ್ಕೆ ಒಂದೇ ಕುಟುಂಬದ 60 ಮಂದಿ ಸದಸ್ಯರು ಮೆರವಣಿಗೆಯಲ್ಲಿ ಬಂದು ಮತ ಚಲಾಯಿಸಿದ್ದು ಅಲ್ಲಿನ ಜನರಿಗೂ ಸಂಭ್ರಮ ಉಂಟುಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.