ನವದೆಹಲಿ: ಭಾರತದಲ್ಲಿ ಮಹಿಳೆಯರ ವೇತನ ಪುರುಷರಿಗಿಂತ ಶೇ. 19ರಷ್ಟು ಕಡಿಮೆ ಎಂದು ಮಾನ್ಸ್ಟರ್ ವೇತನ ಸೂಚ್ಯಂಕ (ಎಂಎಸ್ಐ) ಹೇಳಿದೆ.
ಈ ಸೂಚ್ಯಂಕ ಪ್ರಕಾರ ಪುರುಷರು ಮಹಿಳೆಯರಿಗಿಂತ ₹46.19 ಹೆಚ್ಚು ವೇತನ ಪಡೆಯುತ್ತಾರೆ. ಗಂಟೆಗಳ ಲೆಕ್ಕಾಚಾರದಲ್ಲಿ ನೋಡಿದಾಗ ಪುರುಷರಸರಾಸರಿ ವೇತನ ₹242, 49 ಇದ್ದರೆ, ಮಹಿಳೆಯರ ವೇತನ ₹196.3 ಆಗಿದೆ.
ಐಟಿ/ಐಟಿಇಎಸ್ ಸೇವೆಗಳಲ್ಲಿಯೂ ಪುರುಷ ಮತ್ತು ಮಹಿಳೆಯರ ತಾರತಮ್ಯ ಶೇ. 26ರಷ್ಟು ಇದೆ.ನಿರ್ಮಾಣ ವಲಯದಲ್ಲಿ ಪುರುಷರು ಮಹಿಳೆಯರಿಗಿಂತ ಶೇ.24ರಷ್ಟು ಅಧಿಕ ವೇತನಗಳಿಸುತ್ತಿದ್ದಾರೆ.
ಮಹಿಳೆಯರು ಹೆಚ್ಚಾಗಿ ತೊಡಗಿಕೊಂಡಿರುವ ವಲಯ ಎಂದು ಗುರುತಿಸಲ್ಪಡುವ ಆರೋಗ್ಯ ಸಂರಕ್ಷಣೆ, ಪರಿಪಾಲನೆ ಸೇವೆ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಪುರುಷರು ಮಹಿಳೆಯರಿಗಿಂತ ಶೇ.21ರಷ್ಟು ಹೆಚ್ಚು ವೇತನ ಪಡೆಯುತ್ತಾರೆ.
ಆದಾಗ್ಯೂ, ಆರ್ಥಿಕ ಕ್ಷೇತ್ರಗಳಾದ ಬ್ಯಾಂಕಿಂಗ್ ಮತ್ತು ವಿಮೆ ಕಂಪನಿಗಳಲ್ಲಿ ಪುರುಷರು ಶೇ.2 ಹೆಚ್ಚು ವೇತನ ಪಡೆಯುತ್ತಾರೆ.
ವರದಿ ಪ್ರಕಾರ, ವೃತ್ತಿ ಅನುಭವ ಅಧಿಕ ಇದ್ದರೆ ವೇತನದಲ್ಲಿ ಲಿಂಗ ತಾರತಮ್ಯ ಇನ್ನೂ ವರ್ಧಿಸುತ್ತದೆ.ಆರಂಭಿಕ ವರ್ಷಗಳಲ್ಲಿ ವೇತನ ತಾರತಮ್ಯ ಕಡಿಮೆ ಇದ್ದರೂ ವರ್ಷಗಳು ಕಳೆದಂತೆ ಅದು ಹೆಚ್ಚಾಗುತ್ತಾ ಹೋಗುತ್ತದೆ.2018ರಲ್ಲಿನ ಮಾಹಿತಿ ಪ್ರಕಾರ 0-2 ಮತ್ತು 3-5 ವರ್ಷಗಳಲ್ಲಿ ವೇತನ ತಾರತಮ್ಯ ಅಷ್ಟೇನೂ ಆಗಿಲ್ಲ, ಆದರೆ 6-10 ವರ್ಷಗಳ ಅನುಭವವಿರುವ ವೃತ್ತಿಗಳಲ್ಲಿ ಶೇ.10 ರಷ್ಟು ವೇತನ ತಾರತಮ್ಯ ಕಂಡು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.