ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಹೆಚ್ಚಳದ ಭಾಗವಾಗಿ ಅತ್ಯಂತ ಸುಸಜ್ಜಿತ ಮರ್ಸಿಡಿಸ್ ಮೆಬ್ಯಾಷ್ ಎಸ್650 ಕಾರನ್ನು ಒದಗಿಸಲಾಗಿದೆ. ಇದು ಗುಂಡುಗಳಿಂದ ಮತ್ತು ಸ್ಫೋಟದಿಂದ ರಕ್ಷಣೆ ಒದಗಿಸಬಲ್ಲ ಸುರಕ್ಷಿತ ಕಾರಾಗಿದೆ.
ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ದೆಹಲಿ ಹೈದರಾಬಾದ್ ಭವನಕ್ಕೆ ಆಗಮಿಸಿದಾಗ ಮೊದಲ ಬಾರಿಗೆ, ಡಿಸೆಂಬರ್ 6ಕ್ಕೆ ನೂತನ ಕಾರಿನ ಜೊತೆ ಕಾಣಿಸಿಕೊಂಡಿದ್ದರು. ಇತ್ತೀಚಿನ ರ್‍ಯಾಲಿ ಒಂದರ ಬೆಂಗಾವಲು ವಾಹನಗಳ ಸಾಲಿನಲ್ಲಿ ಈ ಕಾರು ಕಾಣಿಸಿಕೊಂಡಿತ್ತು.
ವರದಿಗಳ ಪ್ರಕಾರ ಹೊಸ ವಾಹನವು ವಿಆರ್10- ಹಂತದ ರಕ್ಷಣೆ ಸೌಲಭ್ಯವನ್ನು ಹೊಂದಿದ್ದು, ಗುಂಡು ನಿರೋಧಕ ಪಾಲಿಕಾರ್ಬೊನೆಟ್ ಲೇಪಿತ ಶಕ್ತಿಶಾಲಿ ಗಾಜುಗಳನ್ನು ಒಳಗೊಂಡಿದೆ. ಕೇವಲ 2 ಮೀಟರ್ ಸುತ್ತಳತೆಯಲ್ಲೇ 15 ಕೆಜಿ ಟಿಎನ್‌ಟಿ ಸ್ಫೋಟಗೊಂಡರೂ ರಕ್ಷಣೆ ನೀಡುತ್ತದೆ.
6.0 ಲೀಟರ್‌ನ ಟ್ವಿನ್-ಟರ್ಬೊ ವಿ12 ಎಂಜಿನ್ ಹೊಂದಿದ್ದು, 516 ಬಿಎಚ್‌ಪಿಯನ್ನು ಉತ್ಪಾದಿಸಬಲ್ಲದು. ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲದು. ಅನಿಲ ದಾಳಿ ಸಂದರ್ಭದಲ್ಲೂ ಕಾರೊಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಗೆ ಉಸಿರಾಡಬಹುದಾದ ವ್ಯವಸ್ಥೆ ಇದಕ್ಕಿದೆ. ವಿಶೇಷ ರನ್-ಫ್ಲಾಟ್ ಚಕ್ರಗಳನ್ನು ಹೊಂದಿದೆ. ಒಂದು ವೇಳೆ ಪಂಕ್ಚರ್ ಆದಾಗ ಅಥವಾ ಚಕ್ರಕ್ಕೆ ಹಾನಿಯುಂಟಾದಾಗ ತಕ್ಷಣ ಸ್ಥಳದಿಂದ ಪಾರಾಗಲು ಈ ವಿಶೇಷ ಚಕ್ರಗಳು ಸಹಕರಿಸುತ್ತವೆ. ಇದರ ಬೆಲೆ ಎಷ್ಟು ಎಂಬುದು ತಿಳಿದು ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.