ADVERTISEMENT

ಚುಚ್ಚುಮಾತು, ಕಿರುಕುಳವು ಮಾನಸಿಕ ಹಿಂಸೆಗೆ ಸಮನಲ್ಲ: ಬಾಂಬೆ ಹೈಕೋರ್ಟ್ ಅಭಿಪ್ರಾಯ

ಪಿಟಿಐ
Published 23 ಜನವರಿ 2024, 12:41 IST
Last Updated 23 ಜನವರಿ 2024, 12:41 IST
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್   

ಮುಂಬೈ: ‘ಚುಚ್ಚುಮಾತುಗಳಿಂದ ನಿಂದಿಸುವುದು, ಕಿರುಕುಳ ಅಥವಾ ಮಾನಸಿಕ ಹಿಂಸೆ ಆಗದು’ ಎಂದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಮಂಗಳವಾರ ಅಭಿಪ್ರಾಯಪಟ್ಟು ಮೂವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಮಹಿಳೆಗೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ 2001ರಲ್ಲಿ ಮಹಿಳೆಯ ಪತಿ, ಅತ್ತೆ ಮತ್ತು ಬಾವನನ್ನು ತಪ್ಪಿತಸ್ಥ ಎಂದು ಕೆಳಹಂತದ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅಭಯ್ ವಾಘವಾಸೆ ಅವರಿದ್ದ ಪೀಠವು, ಮೂವರನ್ನು ಆರೋಪ ಮುಕ್ತಗೊಳಿಸಿದೆ.

ಪ್ರಾಸಿಕ್ಯೂಷನ್ ಪರ ವಕೀಲರು ವಾದ ಮಂಡಿಸಿ, ‘1993ರಲ್ಲಿ ವಿವಾಹವಾಗಿದ್ದ ಮಹಿಳೆಯ ಆರಂಭದ ದಿನಗಳು ಉತ್ತಮವಾಗಿದ್ದವು. ನಂತರ ಅಡುಗೆ ಮತ್ತು ಮನೆಗೆಲಸಗಳನ್ನು ಸರಿ ಮಾಡುವುದಿಲ್ಲ ಎಂದು ಗಂಡನ ಮನೆಯವರು ಮೂದಲಿಸಲು ಆರಂಭಿಸಿದರು. ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಮಹಿಳೆ 1994ರಲ್ಲಿ ಆತ್ಮಹತ್ಯೆ ಮಾಡಿಕೊಂಡರು’ ಎಂದು ಪೀಠಕ್ಕೆ ತಿಳಿಸಿದರು.

ADVERTISEMENT

‘ಮಹಿಳೆಯ ಆತ್ಮಹತ್ಯೆಗೆ ಆಕೆಯ ಪತಿ, ಅತ್ತೆ ಹಾಗೂ ಇತರರು ನೀಡಿದ ಮಾನಸಿಕ ಕಿರುಕುಳ ಹಾಗೂ ಚುಚ್ಚುಮಾತುಗಳೇ ಕಾರಣ. ಆದರೆ ಆಕಸ್ಮಿಕವಾಗಿ ಮಹಿಳೆಗೆ ಸುಟ್ಟ ಗಾಯಗಳಾಗಿತ್ತು ಎಂದು ಅತ್ತೆ ಮನೆಯವರು ಹೇಳಿದರು’ ಎಂದು ಮೃತ ಮಹಿಳೆಯ ಕುಟುಂಬದವರು ನ್ಯಾಯಪೀಠಕ್ಕೆ ವಿವರಿಸಿದರು.

‘ಮಹಿಳೆಗೆ ಬೆಂಕಿ ಹಚ್ಚಿ ಸಾಯಿಸಲಾಗಿದೆ ಎಂದು ಸಾಬೀತುಪಡಿಸಲು ಯಾವ ಸಾಕ್ಷ್ಯವನ್ನು ಹಾಜರುಪಡಿಸದ ಹೊರತೂ, ಆರೋಪ ಹೊತ್ತವರಿಗೆ ಶಿಕ್ಷೆ ವಿಧಿಸುವುದು ನ್ಯಾಯವಲ್ಲ. ಹಾಗೆ ಮಾಡಿದಲ್ಲಿ ಊಹೆಯನ್ನು ಆಧರಿಸಿ ತೀರ್ಪು ನೀಡಿದಂತಾಗಲಿದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

'ಆರೋಪಿಗಳು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಅಥವಾ ಚುಚ್ಚು ಮಾತುಗಳಿಂದ ಆತ್ಮಹತ್ಯೆ ಮಾಡಿಕೊಳ್ಳಲು ಆಕೆಯನ್ನು ಪ್ರೇರೇಪಿಸಿದ್ದಾರೆ ಎಂದು ಸಾಬೀತುಪಡಿಸಲು ಒಂದು ಸಣ್ಣ ಸಾಕ್ಷ್ಯವನ್ನೂ ನ್ಯಾಯಾಲಯಕ್ಕೆ ಒದಗಿಸಿಲ್ಲ. ಚುಚ್ಚುಮಾತು ಮತ್ತು ಹಣಕ್ಕೆ ಪೀಡಿಸುವುದು ದೈಹಿಕ ಅಥವಾ ಮಾನಸಿಕ ಹಿಂಸೆಗೆ ಸಮನಲ್ಲ. ಅದು ಆತ್ಮಹತ್ಯೆಗೆ ಪ್ರಚೋದಿಸಿದೆ ಎಂದು ಸಾಬೀತುಪಡಿಸಲು ಸಾಕಾಗದು’ ಎಂದಿತು.

‘ಪ್ರಕರಣದ ಪ್ರತಿಹಂತದಲ್ಲೂ ಅಡುಗೆ ಸರಿ ಮಾಡುವುದಿಲ್ಲ, ಬೆಳಿಗ್ಗೆ ಬೇಗ ಏಳುವುದಿಲ್ಲ, ಬಟ್ಟೆಯನ್ನು ಸರಿಯಾಗಿ ಒಗೆಯುವುದಿಲ್ಲ ಎಂಬ ಆರೋಪಗಳನ್ನೇ ಮಾಡಲಾಗಿದೆ. ಆದರೆ ವರದಕ್ಷಿಣೆಗಾಗಿ ಮಹಿಳೆಗೆ ನಿಜವಾಗಿಯೂ ಕಿರುಕುಳ ನೀಡಲಾಗಿದೆ ಎಂದು ಸಾಬೀತುಪಡಿಸಲು ವಿಫಲವಾಗಿದೆ’ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.