ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್, ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಮಂಗಳವಾರ ಗಂಭೀರವಾದ ಆರೋಪ ಮಾಡಿದ್ದಾರೆ.
‘ಅಸ್ತಾನ ಅವರು ನನ್ನನ್ನು ದುಬೈನಲ್ಲಿ ಭೇಟಿಯಾಗಿ ಜೈಲಿನ ಜೀವನವನ್ನು ನರಕ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಸಿಬಿಐ ನಡೆಸುವ ತನಿಖೆಗೆ ಸಹಕರಿಸದಿದ್ದರೆ ಈ ರೀತಿ ಮಾಡುವುದಾಗಿ ಹೇಳಿದ್ದರು’ ಎಂದು ಮಿಷೆಲ್ ತಿಳಿಸಿದ್ದಾರೆ.
‘ಕೆಲದಿನಗಳ ಹಿಂದೆ ನನ್ನನ್ನು ರಾಕೇಶ್ ಭೇಟಿಯಾಗಿದ್ದರು. ಆಗಲೇ ಜೀವನ ನರಕ ಮಾಡುವುದಾಗಿ ಬೆದರಿಸಿದ್ದರು. ಇದೀಗ ಜೀವನ ಹಾಗೆಯೇ ಆಗಿದೆ. ಜೈಲಿನಲ್ಲಿ ನನ್ನ ಕೊಠಡಿಯ ಪಕ್ಕವೇ ಗ್ಯಾಂಗ್‌ಸ್ಟರ್ ಛೋಟಾ ರಾಜನ್ ಇದ್ದಾನೆ. ಹಲವರನ್ನು ಹತ್ಯೆ ಮಾಡಿ ಜೈಲು ಸೇರಿದವನ ಜತೆಯೇ ನನ್ನನ್ನು ಇಟ್ಟಿರುವುದಕ್ಕೆ ನಾನು ಯಾವ ಅಪರಾಧ ಮಾಡಿದ್ದೇನೆ ಎಂದೇ ಅರ್ಥವಾಗುವುದಿಲ್ಲ’ ಎಂದು ಮಿಷೆಲ್ ಹೇಳಿದ್ದಾರೆ.
ಕಾಶ್ಮೀರದ 17 ಪ್ರತ್ಯೇಕತಾವಾದಿ ನಾಯಕರ ಜತೆಯಲ್ಲೇ ಜೈಲಿನಲ್ಲಿಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರ ಎದುರು ಮಿಷೆಲ್ ಈ ಹೇಳಿಕೆಗಳನ್ನು ನೀಡಿದ್ದಾರೆ. ತಿಹಾರ್ ಜೈಲಿನಲ್ಲಿ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಕುಮಾರ್ ಅನುಮತಿ ನೀಡಿದ್ದಾರೆ. ಬುಧವಾರ ಮತ್ತು ಗುರುವಾರವೂ ಮಿಷೆಲ್ ವಿಚಾರಣೆ ನಡೆಯಲಿದೆ.
ವಿಚಾರಣೆ ವೇಳೆ ಜೈಲಿನ ಅಧಿಕಾರಿಗಳು ಹಾಜರಿರುತ್ತಾರೆ. ಮಿಷೆಲ್ ವಕೀಲರಿಗೆ ನಿಗದಿತ ಅವಧಿಯ ಹಾಜರಾತಿಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗಿನ ಹೊತ್ತು ಅರ್ಧ ಗಂಟೆ ಹಾಗೂ ಸಂಜೆಯ ಹೊತ್ತು ಅರ್ಧ ಗಂಟೆ ಮಾತ್ರ ಅವರು ಹಾಜರಿರಬಹುದು ಎಂದು ಕೋರ್ಟ್ ನಿರ್ದೇಶಿಸಿದೆ.
ಜೈಲಿನಲ್ಲಿ ತನಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂಬ ಮಿಷೆಲ್ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ಸಿ.ಸಿ ಟಿ.ವಿ ದೃಶ್ಯಾವಳಿಗಳನ್ನು ಗುರುವಾರದ ಒಳಗೆ ಹಾಜರುಪಡಿಸಲು ನ್ಯಾಯಾಲಯ ತಿಹಾರ್ ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ದುಬೈನಿಂದ ಗಡೀಪಾರಾದ ನಂತರ ಮಿಷೆಲ್ ಅವರನ್ನು ಜಾರಿ ನಿರ್ದೇಶನಾಲಯ ಡಿ.22 ರಂದು ಬಂಧಿಸಿತ್ತು.
ಗೌತಮ್ ಕೇತಾನ್ ಅರ್ಜಿ ತಿರಸ್ಕೃತ
ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ಆರೋಪಿ ಗೌತಮ್ ಕೇತಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿನ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ. ಕಪ್ಪು ಹಣ ಸಂಗ್ರಹ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕೇತಾನ್‌ಗೆ ಜಾಮೀನುನಿರಾಕರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.