ನವದೆಹಲಿ: ಆಲ್ ಇಂಡಿಯಾ ರೇಡಿಯೊ (ಎಐಆರ್) ಮಹಿಳಾ ಉದ್ಯೋಗಿಗಳೂ ಕಚೇರಿಯಲ್ಲಿ ಲೈಂಗಿಕ ಕಿರುಕುಳ ಎದುರಿಸಿದ್ದನ್ನು ಬಹಿರಂಗಪಡಿಸಿದ್ದಾರೆ. ಮಧ್ಯಪ್ರದೇಶದ ಶಾಹ್‌ದೊಲ್ ಆಕಾಶವಾಣಿ ಕೇಂದ್ರದ 9 ಮಂದಿ ಉದ್ಘೋಷಕಿಯರು ಆರೋಪ ಮಾಡಿದ್ದು, ಇವರನ್ನೇ ಸೇವೆಯಿಂದ ವಜಾಗೊಳಿಸಿರುವುದು ಬೆಳಕಿಗೆ ಬಂದಿದೆ. ಆರೋಪ ಎದುರಿಸುತ್ತಿರುವ ಅಧಿಕಾರಿ ರತ್ನಾಕರ್ ಭಾರ್ತಿ ಅವರಿಗೆ ಬಡ್ತಿ ನೀಡಿ ದೆಹಲಿಗೆ ವರ್ಗಾವಣೆ ಮಾಡಲಾಗಿದೆ!
2017ರ ಜೂನ್‌ನಲ್ಲಿ ಈ ಮಹಿಳೆಯರು ಪ್ರಕರಣ ದಾಖಲಿಸಿದ್ದರು. ಇದಾದ ನಂತರ ಅವರನ್ನು ವಜಾ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ ಮೂವರು ಸಂತ್ರಸ್ತೆಯರು ತಮಗಾದ ಕಹಿ ಅನುಭವವನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾರೆ.
‘ದಿ ಕ್ವಿಂಟ್’ ಈ ಕುರಿತು ವರದಿ ಮಾಡಿದೆ.
ಹರಿಯಾಣದ ಕುರುಕ್ಷೇತ್ರ, ಉತ್ತರ ಪ್ರದೇಶದ ಒಬ್ರಾ ಮತ್ತು ಹಿಮಾಚಲ ಪ್ರದೇಶದ ಧರ್ಮಶಾಲಾದಎಐಆರ್ ಕೇಂದ್ರಗಳಲ್ಲಿ ಹೆಚ್ಚಿನ ಲೈಂಗಿಕ ಕಿರುಕುಳ ಪ್ರಕರಣಗಳು ನಡೆದಿವೆ ಎನ್ನಲಾಗಿದೆ.
2016ರ ಆಗಸ್ಟ್‌ನಲ್ಲಿ ‘ಮನದ ಮಾತು’ ಕಾರ್ಯಕ್ರಮದ ಸಂದರ್ಭದಲ್ಲಿ ಸ್ಟುಡಿಯೊದಲ್ಲಿದ್ದಾಗ ಕಾರ್ಯಕ್ರಮ ಮುಖ್ಯಸ್ಥ (ಪ್ರೋಗ್ರಾಂ ಹೆಡ್) ಸುರೇಶ್ ಕುಮಾರ್ ಅವರು ಬಲವಂತದಿಂದ ಮುತ್ತಿಕ್ಕಿದ್ದರು ಎಂದು ಧರ್ಮಶಾಲಾದ ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ. ಆದರೆ, ಆ ಸಂದರ್ಭದ ಸಿಸಿಟಿವಿ ದೃಶ್ಯಾವಳಿ ಕಣ್ಮರೆಯಾಗಿದೆ ಎನ್ನಲಾಗಿದೆ.
2010ರಲ್ಲಿ ಪುರುಷ ಸಹೋದ್ಯೋಗಿಗಳು ಕಚೇರಿಯಲ್ಲೇ ಮದ್ಯಪಾನ ಮಾಡುತ್ತಿದ್ದರಲ್ಲದೆ, ಆಶ್ಲೀಲ ಸಿನಿಮಾ ನೋಡಿದ್ದರು ಎಂದುಉತ್ತರ ಪ್ರದೇಶದ ಒಬ್ರಾ ಕೇಂದ್ರದ ಉದ್ಯೋಗಿ ಆರೋಪಿಸಿದ್ದಾರೆ. ಕೇಂದ್ರದ ಗ್ರಂಥಪಾಲಕ ಸುರೇಶ್‌ಚಂದ್ರ ಎಂಬುವವರು ನಗ್ನ ಚಿತ್ರವುಳ್ಳ ನಿಯತಕಾಲಿಕೆಯನ್ನು ತೋರಿಸಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಅವರು ದೂರಿದ್ದಾರೆ. ಕೇಂದ್ರದ ಮುಖ್ಯಸ್ಥ ಜಿ.ಪಿ.ನಿರಾಳ ಎಂಬುವವರು ತಮ್ಮ ವಿರುದ್ಧ ಆಶ್ಲೀಲ ಪದ ಬಳಸಿ ಮಾತನಾಡುತ್ತಿದ್ದರು ಎಂದೂ ಅವರು ಹೇಳಿದ್ದಾರೆ.
**
‘ಉದ್ಯೋಗಿಗಳ ಹಿನ್ನೆಲೆ ಪರೀಕ್ಷಿಸಿ’
ಮುಂಬೈ: ದೇಶದಾದ್ಯಂತ ಮೀ– ಟೂ ಅಭಿಯಾನ ತೀವ್ರ ಸ್ವರೂಪ ಪಡೆಯುತ್ತಿರುವ ಈ ಸಂದರ್ಭದಲ್ಲಿ, ಕಂಪನಿಗಳು ಉನ್ನತ ಹುದ್ದೆಗಳಿಗೆ ಉದ್ಯೋಗಿಗಳನ್ನು ಆಯ್ಕೆ ಮಾಡುವ ವೇಳೆ ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿಸ್ತೃತ ಮಟ್ಟದಲ್ಲಿ ಅವರ ಹಿನ್ನೆಲೆ ಪರಿಶೀಲನೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
‘ಸಾಮಾಜಿಕ ಜಾಲತಾಣಗಳಲ್ಲಿನಪೋಸ್ಟ್‌ಗಳು ಆಯಾ ವ್ಯಕ್ತಿಯ ವರ್ತನೆ, ವ್ಯಕ್ತಿತ್ವವನ್ನು ಬಿಂಬಿಸಬಹುದು’ ಎಂದು ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.