ADVERTISEMENT

ಮಾನನಷ್ಟ ಪ್ರಕರಣ: ಪತ್ರಕರ್ತೆ ಪ್ರಿಯಾ ರಮಣಿ ಖುಲಾಸೆ

#MeToo ಆರೋಪ ಮಾಡಿದ್ದ ಪ್ರಿಯಾ ರಮಣಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ಎಂ.ಜೆ. ಅಕ್ಬರ್‌

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 12:04 IST
Last Updated 17 ಫೆಬ್ರುವರಿ 2021, 12:04 IST
ಪತ್ರಕರ್ತೆ ಪ್ರಿಯಾ ರಮಣಿ
ಪತ್ರಕರ್ತೆ ಪ್ರಿಯಾ ರಮಣಿ   

ನವದೆಹಲಿ: ಕೇಂದ್ರದ ಮಾಜಿ ಸಚಿವ ಹಾಗೂ ಪತ್ರಕರ್ತ ಎಂ.ಜೆ. ಅಕ್ಬರ್ ಅವರು#MeToo ಅಭಿಯಾನ ಸಂಬಂಧ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಪ್ರಿಯಾ ರಮಣಿಯವರನ್ನು ದೆಹಲಿ ಕೋರ್ಟ್ ಬುಧವಾರ ಖುಲಾಸೆಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಅವರು, ಪ್ರಿಯಾ ರಮಣಿ ವಿರುದ್ಧ ಯಾವುದೇ ಆರೋಪಗಳು ಸಾಬೀತಾಗಿಲ್ಲ ಎಂದು ಅಕ್ಬರ್ ಸಲ್ಲಿಸಿದ ದೂರನ್ನು ವಜಾಗೊಳಿಸಿದರು.

ಅಕ್ಬರ್ ಮತ್ತು ರಮಣಿ ಅವರ ವಾದಗಳನ್ನು ಫೆಬ್ರುವರಿ 1ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ, ಫೆ.17ಕ್ಕೆ ತೀರ್ಪು ಕಾಯ್ದಿರಿಸಿತ್ತು.

ADVERTISEMENT

‘ಮಹಾಭಾರತ ಮತ್ತು ರಾಮಾಯಣದಂತಹ ಮಹಾ ಪುರಾಣ ಕಾವ್ಯಗಳನ್ನು ಗೌರವಿಸುವ ದೇಶದಲ್ಲಿ ಮಹಿಳೆಯರ ವಿರುದ್ಧ ಅಪರಾಧಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಾಮಾಜಿಕ ಸ್ಥಾನಮಾನ ಹೊಂದಿದ ವ್ಯಕ್ತಿ ಕೂಡ ಲೈಂಗಿಕ ಕಿರುಕುಳ ನೀಡಬಹುದು ಎನ್ನುವುದನ್ನು ಗಮನಿಸಿದರೆ, ಕಿರುಕುಳಕ್ಕೆ ಒಳಗಾದ ಮಹಿಳೆ ದಶಕಗಳ ನಂತರವೂ ತನ್ನ ಆಯ್ಕೆಯ ಯಾವುದೇ ವೇದಿಕೆಯ ಮುಂದೆ ತನ್ನ ಕುಂದುಕೊರತೆಗಳನ್ನು ಹೇಳಿಕೊಳ್ಳುವ ಹಕ್ಕು ಹೊಂದಿದ್ದಾಳೆ’ ಎಂದು ನ್ಯಾಯಮೂರ್ತಿಗಳು ಇದೇ ಸಂದರ್ಭ ಹೇಳಿದರು.

ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಿಯಾ ರಮಣಿ, ‘ನ್ಯಾಯಾಲಯದ ಮುಂದೆ ಸತ್ಯವನ್ನು ಮೌಲ್ಯೀಕರಿಸುವುದು ಬಹಳ ಒಳ್ಳೆಯದು. ನಾನು ವ್ಯವಸ್ಥೆಯ ಬಲಿಪಶುವಾಗಿ ನ್ಯಾಯಾಲಯದ ಕಟಕಟೆಯಲ್ಲಿ ಆರೋಪಿಯಾಗಿ ನಿಂತಿದ್ದೆ. ನನ್ನೊಂದಿಗೆ ನಿಂತ ಎಲ್ಲರಿಗೂ ವಿಶೇಷವಾಗಿ ನನ್ನ ಪರ ನ್ಯಾಯಾಲಯಕ್ಕೆ ಬಂದು ಸಾಕ್ಷ್ಯ ನುಡಿದ ಸಾಕ್ಷಿ ಘಜಾಲಾ ವಹಾಬ್ ಅವರಿಗೂ ಧನ್ಯವಾದ’ ಎಂದು ಹೇಳಿದ್ದಾರೆ.

‘ನ್ಯಾಯಾಲಯಕ್ಕೆ ಧನ್ಯವಾದ ಹೇಳುವೆ. ನನ್ನ ವಕೀಲ ರೆಬೆಕ್ಕಾ ಜಾನ್ ಮತ್ತು ನನ್ನನ್ನು ನಂಬಿ ಬೆಂಬಲಿಸಿದವರಿಗೂ ಅನಂತ ಧನ್ಯವಾದಗಳು. ಅವರೆಲ್ಲರೂ ತಮ್ಮ ಹೃದಯ ಮತ್ತು ಆತ್ಮವನ್ನು ಈ ಪ್ರಕರಣದಲ್ಲಿ ಇರಿಸಿದ್ದರು’ ಎಂದು ರಮಣಿ ಹೇಳಿದ್ದಾರೆ.

2018ರಲ್ಲಿ #MeToo ಅಭಿಯಾನ ಮುನ್ನೆಲೆಗೆ ಬಂದಾಗ ಪ್ರಿಯಾ ರಮಣಿ ಅವರು ಎಂ.ಜೆ. ಅಕ್ಬರ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದ ಅಕ್ಬರ್‌, 2018ರ ಅ.15ರಂದು ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅಕ್ಬರ್‌ ವಿರುದ್ಧ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅ.17ರಂದು ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.