ನವದೆಹಲಿ: ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ದಾಖಲಿಸಿದ್ದ ದೂರಿನ ಅನ್ವಯ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದೆಹಲಿ ನ್ಯಾಯಾಲಯ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
ಎಂ.ಜೆ. ಅಕ್ಬರ್ ಅವರು ಪತ್ರಕರ್ತರಾಗಿದ್ದ ವೇಳೆ, 20 ವರ್ಷಗಳ ಹಿಂದೆ ಅನುಚಿತ ವರ್ತನೆ ತೋರಿದ್ದರು ಎಂದು ರಮಣಿ ಆರೋಪಿಸಿದ್ದರು. ಇದನ್ನು ನಿರಾಕರಿಸಿದ್ದ ಅಕ್ಬರ್, ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಎದುರು ವಿಚಾರಣೆಗೆ ಹಾಜರಾದ ಪ್ರಿಯಾ ರಮಣಿ, ನಾನೇನು ತಪ್ಪು ಮಾಡಿಲ್ಲ. ಹಾಗಾಗಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.
‘ಸಾರ್ವಜನಿಕ ಹಿತಾಸಕ್ತಿಗಾಗಿ ಈ ಹೇಳಿಕೆ ನೀಡಿದ್ದೇನೆ. ನಾನು ಹೇಳುತ್ತಿರುವುದು ಸತ್ಯ ಎಂಬುದನ್ನುವಿಚಾರಣೆ ವೇಳೆ ಸಾಬೀತು ಮಾಡುತ್ತೇನೆ. ನಾನು ಅಪರಾಧಿ ಅಲ್ಲ’ ಎಂದು ತಿಳಿಸಿದ್ದಾರೆ.
ರಮಣಿ ಅವರಿಗೆ ಚಿಕ್ಕ ಮಗು ಇರುವ ಕಾರಣ ನ್ಯಾಯಾಲಯದ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ.
ಅಕ್ಬರ್ ಪರ ವಕೀಲರು ಈ ವಿನಾಯಿತಿ ರದ್ಧತಿಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ವಿಚಾರಣೆಯನ್ನು ಮೇ 4ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.