ADVERTISEMENT

ಸಾರ್ವಜನಿಕ ಹಿತಕ್ಕಾಗಿ ಲೈಂಗಿಕ ಕಿರುಕುಳ ಬಹಿರಂಗ: ಕೋರ್ಟ್‌ಗೆ ಪ್ರಿಯಾರಮಣಿ

‘ಮೀ ಟೂ’ ಆಂದೋಲನ: ಮಾಜಿ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಆರೋಪ

ಪಿಟಿಐ
Published 5 ಸೆಪ್ಟೆಂಬರ್ 2020, 15:43 IST
Last Updated 5 ಸೆಪ್ಟೆಂಬರ್ 2020, 15:43 IST
ಎಂ.ಜೆ. ಅಕ್ಬರ್
ಎಂ.ಜೆ. ಅಕ್ಬರ್   

ನವದೆಹಲಿ: ‘ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ಅವರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಿದ್ದೇನೆಯೇ ಹೊರತು ಮಾನನಷ್ಟದ ಕಾರಣಕ್ಕಾಗಿ ಅಲ್ಲ’ ಎಂದು ಪತ್ರಕರ್ತೆ ಪ್ರಿಯಾ ರಮಣಿ ದೆಹಲಿ ನ್ಯಾಯಾಲಯಕ್ಕೆ ಶನಿವಾರ ತಿಳಿಸಿದ್ದಾರೆ.

ಅಕ್ಬರ್ ವಿರುದ್ಧ ಸಲ್ಲಿಸಿರುವ ಕ್ರಿಮಿನಲ್ ಮಾನಹಾನಿ ದೂರಿನ ಅಂತಿಮ ವಿಚಾರಣೆ ವೇಳೆ ತಮ್ಮ ವಕೀಲರ ಮೂಲಕ ಪ್ರಿಯಾ ರಮಣಿ, ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ ಅವರ ಮುಂದೆ ಈ ರೀತಿ ಹೇಳಿಕೆ ನೀಡಿದ್ದಾರೆ.

‘ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿಯ ಬಗ್ಗೆ ಸಾರ್ವಜನಿಕ ಹಿತದೃಷ್ಟಿಯಿಂದ ಸತ್ಯ ಹೇಳುವುದು ಮಾನಹಾನಿ ಅಲ್ಲ’ ಎಂದು ಪ್ರಿಯಾ ರಮಣಿ ಪರ ವಕೀಲರಾದ ರೆಬೆಕಾ ಜಾನ್ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ವಿಚಾರಣೆ ವೇಳೆ ತಿಳಿಸಿದ್ದಾರೆ.

ADVERTISEMENT

ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 8ಕ್ಕೆ ಮುಂದೂಡಿದೆ.

ತಾನು ಪತ್ರಕರ್ತೆಯಾಗಿದ್ದಾಗ ಅಕ್ಬರ್ ಲೈಂಗಿಕ ಕಿರುಕುಳ ನೀಡಿದ್ದರು ಎಂದು ‘ಮೀ ಟೂ’ ಆಂದೋಲನದ ವೇಳೆ ಪ್ರಿಯಾರಮಣಿ ಆರೋಪಿಸಿದ್ದರು. ಆರೋಪ ಬರುತ್ತಿದ್ದಂತೆ 2018ರ ಅ. 17ರಂದು ಅಕ್ಬರ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.