ADVERTISEMENT

ಮೀ–ಟೂ ಪ್ರಕರಣ: ನಾನಾ ಪಾಟೇಕರ್‌ ದೋಷಮುಕ್ತ

ನಟಿ ತನುಶ್ರೀ ದತ್ತ ದಾಖಲಿಸಿದ್ದ ಪ್ರಕರಣ

ಪಿಟಿಐ
Published 13 ಜೂನ್ 2019, 18:30 IST
Last Updated 13 ಜೂನ್ 2019, 18:30 IST
ತನುಶ್ರೀ ದತ್ತ 
ತನುಶ್ರೀ ದತ್ತ    

ಮುಂಬೈ: ಹಿರಿಯ ನಟ ನಾನಾ ಪಾಟೇಕರ್‌ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ನಟಿ ತನುಶ್ರೀ ದತ್ತ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂದು ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಒಷಿವಾರಾ ಪೊಲೀಸರು ಬುಧವಾರ ಈ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಾಧಾರ ಇಲ್ಲ ಎಂಬುದಾಗಿ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ ಎಂದು ಡಿಸಿಪಿ ಪರಮ್‌ಜಿತ್‌ ಸಿಂಗ್‌ ದಹಿಯಾ ತಿಳಿಸಿದ್ದಾರೆ.

’ಹಾರ್ನ್‌ ಒಕೆ ಪ್ಲೀಸ್‌’ ಎಂಬ ಚಿತ್ರದ ಹಾಡಿನ ಶೂಟಿಂಗ್‌ ಸಂದರ್ಭದಲ್ಲಿ ನಾನಾ ಪಾಟೇಕರ್‌ ನನ್ನೊಂದಿಗೆ ಅನುಚಿತವಾಗಿ ವರ್ತಿಸಿ ದೌರ್ಜನ್ಯ ಎಸಗಿರುವುದಾಗಿ 2018ರ ಅಕ್ಟೋಬರ್‌ನಲ್ಲಿ ತನುಶ್ರೀ ದತ್ತ ದೂರು ಸಲ್ಲಿಸಿದ್ದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ನಾನಾಪಾಟೇಕರ್‌ ಪರ ವಕೀಲ ಅನಿಕೇತ್‌ ನಿಕಮ್‌,‘ ಪ್ರಕರಣ ದಾಖಲಾದಾಗಲೇ ಇದು ಸುಳ್ಳುಪ್ರಕರಣ ಎಂಬುದು ಗೊತ್ತಿತ್ತು. ಸತ್ಯವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಒಂದಲ್ಲ ಒಂದು ದಿನ ಬೆಳಕಿಗೆ ಬಂದೇ ಬರುತ್ತದೆ. ಪಾಟೇಕರ್‌ಗೆ ನ್ಯಾಯ ಸಿಕ್ಕಿದೆ’ ಎಂದಿದ್ದಾರೆ.

ಅದರೆ ತನುಶ್ರೀ ಅವರ ಪರ ವಕೀಲರಾದ ನಿತಿನ್‌ ಸತ್ಪುತೆ,‘ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ನನಗಾಗಲೀ, ತನುಶ್ರೀಗಾಗಲೇ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಲ್ಲದೆ ಈ ವರದಿಯು ಅಂತಿಮವಲ್ಲ. ನ್ಯಾಯಾಲಯ ಈ ಬಗ್ಗೆ ಮರು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಬಹುದು’ ಎಂದು ಹೇಳಿದ್ದಾರೆ.

ಅಶ್ಲೀಲ ಅಥವಾ ಕಿರಿಕಿರಿ ಎನಿಸುವ ದೃಶ್ಯಗಳ ಚಿತ್ರೀಕರಣಕ್ಕೆ ಸಮ್ಮತಿ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರೂ, ನಾನಾ ಪಾಟೇಕರ್‌ ಹಾಡಿನ ಚಿತ್ರೀಕರಣ ಸಂದರ್ಭದಲ್ಲಿ ತನಗೆ ಕಿರಿಕಿರಿ ಉಂಟು ಮಾಡುವಂತೆ ಸ್ಪರ್ಶಿಸಿದ್ದಾರೆ ಎಂದು ತನುಶ್ರೀ ದೂರಿನಲ್ಲಿ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.