ಬೆಂಗಳೂರು:ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ,ಅಯ್ಯಪ್ಪಧರ್ಮ ಸೇನಾ ಮುಖ್ಯಸ್ಥ ರಾಹುಲ್ ಈಶ್ವರ್ ವಿರುದ್ಧ ಮಹಿಳೆಯೊಬ್ಬರು ಮೀಟೂ ಆರೋಪ ಮಾಡಿದ್ದಾರೆ.
ರಾಹುಲ್ ಈಶ್ವರ್ ತಮ್ಮ ಸ್ನೇಹಿತೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ‘ಇಂಜಿ ಪೆಣ್ಣು’ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
‘ಖ್ಯಾತ ಕಲಾವಿದೆಯಾಗಿರುವ ನನ್ನ ಸ್ನೇಹಿತೆಯೊಬ್ಬಳು ನಿನ್ನೆ ಬೆಳಿಗ್ಗೆ ಸಂದೇಶಗಳನ್ನು ಕಳುಹಿಸಿ ರಾಹುಲ್ ಈಶ್ವರ್ ಕಿರುಕುಳ ನೀಡಿದ ಬಗ್ಗೆ ಹೇಳಿಕೊಂಡಳು. ನನಗೆ ದಿಗಿಲಾಯಿತು’ ಎಂದುಇಂಜಿ ಪೆಣ್ಣು ಬರೆದುಕೊಂಡಿದ್ದಾರೆ. ಅಲ್ಲದೆ, ಸಂತ್ರಸ್ತೆ ಜತೆ ವಿನಿಮಯ ಮಾಡಿಕೊಂಡ ಸಂದೇಶದ ಸ್ಕ್ರೀನ್‌ಶಾಟ್ ಅನ್ನೂ ಲಗತ್ತಿಸಿದ್ದಾರೆ. ಸಂತ್ರಸ್ತೆಯನ್ನು ಮನೆಗೆ ಕರೆಸಿಕೊಂಡಿದ್ದ ಈಶ್ವರ್ ಪದೇಪದೇಆಕೆಗೆ ಮುತ್ತಿಕ್ಕಲು ಪ್ರಯತ್ನಿಸಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದರು. ಆಗ ಸಂತ್ರಸ್ತೆಗೆ 18 ವರ್ಷ ವಯಸ್ಸಾಗಿತ್ತು ಎಂದು ಇಂಜಿ ಪೆಣ್ಣು ಆರೋಪಿಸಿದ್ದಾರೆ.
‘ರಾಹುಲ್ ಈಶ್ವರ್ ಸ್ನೇಹಿತನಾದಾಗ ನನಗೆ ಸಂತೋಷವಾಗಿತ್ತು. ಆಗ ಒಂದು ದಿನ ಅವರು ನನ್ನನ್ನು ಮನೆಗೆ ಬರುವಂತೆ ಆಹ್ವಾನಿಸಿದರು. ಮನೆಯಲ್ಲಿ ತಾಯಿ ಇದ್ದಾರೆ. ನೀವು ಬಂದರೆ ವಿಚಾರ ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಿದ್ದರು. ನಾನು ಅವರ ಫ್ಲ್ಯಾಟ್ ತಲುಪಿದಾಗ ಅಲ್ಲಿ ಅವರ ತಾಯಿ ಇಲ್ಲದಿರುವುದು ತಿಳಿಯಿತು. ನನಗೆ ತುಸು ಭಯವಾಯಿತು. ತುಸು ಅಶ್ಲೀಲತೆ ಒಳಗೊಂಡಿದ್ದ ಸಿನಿಮಾವನ್ನು ಅವರು ನೋಡುತ್ತಿದ್ದರು. ನನಗೆ ಕಿರಿಕಿರಿಯಾಗಲು ಶುರುವಾಯಿತು. ನಂತರ ಅವರು ತಮ್ಮ ಫ್ಲ್ಯಾಟ್ ಅನ್ನು ನನಗೆ ತೋರಿಸಲು ಆರಂಭಿಸಿದರು. ಒಂದು ಕೊಠಡಿಯನ್ನು ತೋರಿಸಿ ಇದು ನನ್ನ ಬೆಡ್‌ರೂಮ್ ಎಂದರು. ನನ್ನ ಮೈಮುಟ್ಟಲು, ಮುತ್ತುಕೊಡಲು ಮುಂದಾದರು. ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದರು. ನಂತರ ಅಲ್ಲಿಂದ ಹೇಗೋ ತಪ್ಪಿಸಿಕೊಂಡೆ’ ಎಂದು ಸಂತ್ರಸ್ತೆ ಹೇಳಿಕೊಂಡಿರುವುದಾಗಿಇಂಜಿ ಪೆಣ್ಣು ಬರೆದುಕೊಂಡಿದ್ದಾರೆ.
ರಾಹುಲ್ ಈಶ್ವರ್ ವಿರುದ್ಧದ ಮೀಟೂ ಆರೋಪ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಬರಿಮಲೆ ವಿಚಾರದಲ್ಲಿ ಹೋರಾಟ ನಡೆಸುವ ನೈತಿಕತೆ ರಾಹುಲ್‌ಗೆ ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಿತಿಯ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದನ್ನು ಖಂಡಿಸಿ, ಉದ್ರೇಕಕಾರಿ ಹೇಳಿಕೆ ನೀಡಿದ ಆರೋಪದಲ್ಲಿರಾಹುಲ್ ಈಶ್ವರ್ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.