ADVERTISEMENT

ಮುಂಬೈ ಆರೆ ಅರಣ್ಯ ಪ್ರದೇಶದಿಂದ ಮೆಟ್ರೊ ಕಾರ್‌ ಶೆಡ್‌ ಸ್ಥಳಾಂತರ: ಉದ್ಧವ್‌ ಠಾಕ್ರೆ

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಘೋಷಣೆ

ಪಿಟಿಐ
Published 11 ಅಕ್ಟೋಬರ್ 2020, 11:18 IST
Last Updated 11 ಅಕ್ಟೋಬರ್ 2020, 11:18 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ‘ಇಲ್ಲಿನ ಆರೆ ಅರಣ್ಯ ಪ್ರದೇಶದಿಂದ ಮೆಟ್ರೊ ಕಾರ್‌ ಶೆಡ್‌ಅನ್ನು ಸ್ಥಳಾಂತರಿಸಲಾಗುವುದು. ಈ ಯೋಜನೆಯನ್ನು ಕಾಂಜೂರ್‌ಮಾರ್ಗದಲ್ಲಿ ಕಾರ್ಯಗತಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭಾನುವಾರ ಘೋಷಿಸಿದರು.

ವೆಬ್‌ಕ್ಯಾಸ್ಟ್‌ ಮೂಲಕ ಈ ಘೋಷಣೆ ಮಾಡಿದ ಅವರು, ‘ಕಾಂಜೂರ್‌ಮಾರ್ಗದಲ್ಲಿರುವ ಸರ್ಕಾರಿ ಜಾಗದಲ್ಲಿ ಮೆಟ್ರೊ ಕಾರ್‌ ಶೆಡ್‌ ನಿರ್ಮಿಸಲಾಗುವುದು. ಹೀಗಾಗಿ ಈ ಯೋಜನೆ ಉದ್ದೇಶಕ್ಕೆ ಭೂ ಸ್ವಾಧೀನಕ್ಕಾಗಿ ಯಾವುದೇ ವೆಚ್ಚ ತಗುಲುವುದಿಲ್ಲ’ ಎಂದರು.

‘ಈಗಾಗಲೇ ₹ 100 ಕೋಟಿ ವೆಚ್ಚದಲ್ಲಿ ಅರೆ ಅರಣ್ಯ ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡಗಳನ್ನು ಇತರ ಸಾರ್ವಜನಿಕ ಉದ್ದೇಶಕ್ಕೆ ಬಳಸಿಕೊಳ್ಳುವುದರಿಂದ, ಕಟ್ಟಡ ನಿರ್ಮಾಣಕ್ಕೆ ವ್ಯಯಿಸಿದ ಹಣ ವ್ಯರ್ಥವಾಗದು’ ಎಂದೂ ಅವರು ಹೇಳಿದರು.

ADVERTISEMENT

‘ಆರೆ ಅರಣ್ಯ ಪ್ರದೇಶದಲ್ಲಿ ಮೆಟ್ರೊ ಕಾರ್‌ ಶೆಡ್‌ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದ ನಾಗರಿಕರು ಹಾಗೂ ಪರಿಸರವಾದಿಗಳ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆಯಲಾಗಿದೆ’ ಎಂದರು.

ಈ ಯೋಜನೆಯನ್ನು ಆರೆ ಅರಣ್ಯ ಪ್ರದೇಶದಿಂದ ಸ್ಥಳಾಂತರಿಸುವ ಕುರಿತಂತೆ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವಿಸ್‌, ‘ರಾಜ್ಯ ಸರ್ಕಾರದ ಈ ನಿರ್ಧಾರ ಸರಿಯಲ್ಲ. ಇದು ಸರ್ಕಾರ ಅನುಸರಿಸುತ್ತಿರುವ ತಪ್ಪು ನೀತಿಯ ದ್ಯೋತಕ ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.