ADVERTISEMENT

ಲವ್ ಜಿಹಾದ್ ವಿಷಯದಲ್ಲಿ ಬಿಜೆಪಿ ಬೆಂಬಲಿಸಿದ ಇ. ಶ್ರೀಧರನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2021, 8:08 IST
Last Updated 20 ಫೆಬ್ರುವರಿ 2021, 8:08 IST
ಇ. ಶ್ರೀಧರನ್
ಇ. ಶ್ರೀಧರನ್   

ತಿರುವನಂತಪುರ: ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಘೋಷಿಸಿರುವ ಮೆಟ್ರೊ ಮ್ಯಾನ್ ಖ್ಯಾತಿಯ ಇ. ಶ್ರೀಧರನ್, 'ಲವ್ ಜಿಹಾದ್' ವಿಷಯದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಕೇರಳದಲ್ಲಿ ಹಿಂದೂ ಹಾಗೂ ಕ್ರೈಸ್ತ ಹುಡುಗಿಯರನ್ನು ಮೋಸಗೊಳಿಸಿರುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಶ್ರೀಧರನ್, ದೇಶದಲ್ಲಿ ಬಿಜೆಪಿ ಪಕ್ಷವನ್ನು ಕೋಮುವಾದಿ ಪಕ್ಷ ಎಂದು ಚಿತ್ರಿಸಲಾಗುತ್ತಿದೆ. ಆದರೆ ತಾವು ಕೇಸರಿ ಪಕ್ಷವನ್ನು ದೇಶಪ್ರೇಮಿ ಪಕ್ಷವಾಗಿ ಕಾಣುವುದಾಗಿ ತಿಳಿಸಿದರು.

ಬಿಜೆಪಿ ಜನರೊಂದಿಗೆ ಒಡನಾಟದಿಂದಾಗಿ ನಾನು ಇದನ್ನು ಹೇಳುತ್ತಿಲ್ಲ. ಬಿಜೆಪಿ ಕೋಮುವಾದಿ ಪಕ್ಷವೇ ಅಲ್ಲ. ಇದು ರಾಷ್ಟ್ರ ಪ್ರೇಮಿಗಳನ್ನು ಒಳಗೊಂಡಿರುವ ಪಕ್ಷವಾಗಿದ್ದು, ಎಲ್ಲ ಪಕ್ಷಗಳು, ಎಲ್ಲ ಸಮುದಾಯಗಳನ್ನು ಒಪ್ಪಿಕೊಳ್ಳುತ್ತಾರೆ. ಅದುವೇ ನರೇಂದ್ರ ಮೋದಿ ಸರ್ಕಾರದ ನೀತಿಯಾಗಿದೆ. ಅವರು ಮಾತನಾಡುವ ವಿಧಾನವನ್ನೇ ನೋಡಬಹುದು. ಯಾವ ಸಂದರ್ಭದಲ್ಲೂ ಯಾವುದೇ ಧರ್ಮದ ವಿರುದ್ಧ ಆಕ್ರಮಣ ಮಾಡುವುದನ್ನು ನಾನು ನೋಡಿಲ್ಲ. ಈ ಧಾರ್ಮಿಕ ಪಕ್ಷಪಾತವು ಬಿಜೆಪಿ ಮೇಲಿನ ಅನಗತ್ಯ ನಿಂದನೆಯಾಗಿದ್ದು, ಅನ್ಯಾಯವಾಗಿದೆ ಎಂದು ಹೇಳಿದರು.

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಗುರುವಾರದಂದು ಇ. ಶ್ರೀಧರನ್ ಖಚಿತಪಡಿಸಿದ್ದರು. ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಹೆಚ್ಚಿನ ಕುತೂಹಲ ಕೆರಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.