ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಗೆ (ಎಫ್‌ಸಿಆರ್‌ಎ) ಸಂಬಂಧಿಸಿದಂತೆ ಕೆಲವು ತಿದ್ದುಪಡಿಗಳನ್ನು ಮಾಡಿದ್ದು, ಅಧಿಕಾರಿಗಳಿಗೆ ಮಾಹಿತಿ ನೀಡದೇ ವಿದೇಶದಲ್ಲಿರುವ ಸಂಬಂಧಿಕರಿಂದ ಭಾರತೀಯರು ಒಂದು ವರ್ಷದಲ್ಲಿ ₹ 10 ಲಕ್ಷ ಪಡೆಯಬಹುದಾಗಿದೆ.
ಈ ಹಿಂದೆ ಹಣ ಪಡೆಯುವ ಮಿತಿಯು ₹ 1 ಲಕ್ಷ ಮಾತ್ರ ಇತ್ತು. ವಿದೇಶಿ ದೇಣಿಗೆ (ನಿಯಂತ್ರಣ) ತಿದ್ಡುಪಡಿಯ ನಿಯಮಗಳು 2022 ಅನ್ನು ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ರಾತ್ರಿ ಗೆಜೆಟ್ ಅಧಿಸೂಚನೆಯ ಮೂಲಕ ಹೊರಡಿಸಿದೆ.
₹ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತವಿದ್ದರೆ, ವ್ಯಕ್ತಿಗಳು ಸರ್ಕಾರಕ್ಕೆ 90 ದಿನಗಳ ಕಾಲಾವಧಿಯೊಳಗೆ ಮಾಹಿತಿ ನೀಡಬೇಕು. ಈ ಹಿಂದೆ 30 ದಿನಗಳ ಮುಂಚೆಯೇ ಸರ್ಕಾರಕ್ಕೆ ಮಾಹಿತಿ ನೀಡಬೇಕಿತ್ತು ಎಂದು ಗೃಹ ಸಚಿವಾಲಯವು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
ಎಫ್‌ಸಿಆರ್‌ಸಿ ಅಡಿಯಲ್ಲಿ ದೇಣಿಗೆಯನ್ನು ಪಡೆಯುವ ಮುನ್ನ ನೋಂದಣಿ (ರಿಜಿಸ್ಟ್ರೇಷನ್) ಅಥವಾ ಪೂರ್ವಾನುಮತಿ ಪಡೆಯುವ ಅರ್ಜಿಗೆ ಸಂಬಂಧಿಸಿದ ಪ್ರಕ್ರಿಯೆಯ ನಿಯಮ–9 ಅನ್ನು ಬದಲಾವಣೆ ಮಾಡುವುದು, ತಿದ್ದುಪಡಿ ಮಾಡಿದ ನಿಯಮಗಳ ಪ್ರಕಾರ ಬ್ಯಾಂಕ್ ಖಾತೆಯ ಬಗ್ಗೆ ಗೃಹ ಸಚಿವಾಲಯಕ್ಕೆ ತಿಳಿಸಲು ವ್ಯಕ್ತಿಗಳು ಮತ್ತು ಸಂಸ್ಥೆಗಳು ಅಥವಾ ಎನ್‌ಜಿಒಗಳಿಗೆ 45 ದಿನಗಳ ಕಾಲಾವಕಾಶವನ್ನು ನೀಡಿದೆ. ಈ ಹಿಂದೆ 30 ದಿನಗಳ ಕಾಲಾವಕಾಶವಿತ್ತು.
ಎನ್‌ಜಿಒ ಅಥವಾ ವಿದೇಶಿ ದೇಣಿಗೆಯನ್ನು ಸ್ವೀಕರಿಸುವ ವ್ಯಕ್ತಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಅಂತಹ ಕೊಡುಗೆಗಳನ್ನು ಘೋಷಿಸಬೇಕಾದ ನಿಬಂಧನೆಯನ್ನು ಸಹ ಗೃಹ ಸಚಿವಾಲಯವು ತೆಗೆದುಹಾಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.