ADVERTISEMENT

ಪಶ್ಚಿಮ ಬಂಗಾಳ ಸಿಎಸ್‌, ಡಿಜಿಪಿಗೆ ಗೃಹ ಸಚಿವಾಲಯದಿಂದ ಸಮನ್ಸ್‌

ಕಾನೂನು–ಸುವ್ಯವಸ್ಥೆ ಕುರಿತು ವಿವರಣೆ ನೀಡಲು ಸೂಚನೆ

ಪಿಟಿಐ
Published 11 ಡಿಸೆಂಬರ್ 2020, 7:51 IST
Last Updated 11 ಡಿಸೆಂಬರ್ 2020, 7:51 IST
ಜೆ.ಪಿ.ನಡ್ಡಾ
ಜೆ.ಪಿ.ನಡ್ಡಾ   

ನವದೆಹಲಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನಗಳ ಮೇಲೆ ನಡೆದಿದೆ ಎನ್ನಲಾದ ದಾಳಿಗೆ ಸಂಬಂಧಿಸಿದಂತೆ, ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರಿಗೆ ಶುಕ್ರವಾರ ಸಮನ್ಸ್‌ ಜಾರಿ ಮಾಡಿದೆ.

ಡಿ. 14ರಂದು ಹಾಜರಾಗಿ, ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ, ರಾಜಕೀಯ ಹಿಂಸಾಚಾರ ಮತ್ತು ಇತರ ಅಪರಾಧಗಳನ್ನು ತಡೆಗಟ್ಟಲು ಕೈಗೊಂಡ ಕ್ರಮಗಳ ಕುರಿತು ವಿವರಣೆ ನೀಡುವಂತೆ ಮುಖ್ಯಕಾರ್ಯದರ್ಶಿ ಆಲಾಪನ್‌ ಬಂದೋಪಾಧ್ಯಾಯ, ಡಿಜಿಪಿ ವೀರೇಂದ್ರ ಅವರಿಗೆ ಸೂಚಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಡ್ಡಾ ಅವರು ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್‌ಗೆ ತೆರಳುತ್ತಿದ್ದ ವೇಳೆ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲೂ ತೂರಾಟ ನಡೆದಿತ್ತು ಎಂದು ಆರೋಪಿಸಲಾಗಿದೆ.

ADVERTISEMENT

ದಾಳಿ ಘಟನೆ ಕುರಿತಂತೆ ವರದಿ ಸಲ್ಲಿಸುವಂತೆ ರಾಜ್ಯಪಾಲ ಜಗದೀಪ್‌ ಧನಕರ್‌ ಅವರಿಗೆ ಸೂಚಿಸಲಾಗಿತ್ತು. ಅವರು ವರದಿ ಸಲ್ಲಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಈ ಇಬ್ಬರು ಹಿರಿಯ ಅಧಿಕಾರಿಗಳಿಗೆ ಸಮನ್ಸ್‌ ಜಾರಿ ಮಾಡಲಾಗಿದೆ.

ಈ ಘಟನೆ ಕುರಿತಂತೆ ರಾಜ್ಯ ಸರ್ಕಾರ ಇನ್ನೂ ವರದಿ ಸಲ್ಲಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.