ADVERTISEMENT

ಗೊಗೊಯಿ ವಿರುದ್ಧದ ಅರ್ಜಿ ವಜಾ, ಅರ್ಜಿದಾರನನ್ನು ಹೊರಕಳುಹಿಸಲು ಸೂಚಿಸಿದ ಪೀಠ 

ಪಿಟಿಐ
Published 15 ಅಕ್ಟೋಬರ್ 2024, 14:33 IST
Last Updated 15 ಅಕ್ಟೋಬರ್ 2024, 14:33 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ವಿರುದ್ಧ ಅರ್ಜಿ ಸಲ್ಲಿಸಿದ್ದ ವಕೀಲ ಮತ್ತು ಸುಪ್ರೀಂ ಕೋರ್ಟ್‌ ಪೀಠದ ನಡುವೆ ಮಂಗಳವಾರ ತೀವ್ರ ವಾದ–ವಿವಾದ ನಡೆಯಿತು. 

ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್‌ ಚಂದ್ರ ಶರ್ಮಾ ಅವರು ಅರ್ಜಿದಾರನನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕಳುಹಿಸುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದ ಪ್ರಸಂಗವೂ ನಡೆಯಿತು.

ADVERTISEMENT

ಸೇವಾ ತಕರಾರಿಗೆ ಸಂಬಂಧಿಸಿದ ಅರ್ಜಿಯೊಂದನ್ನು ವಜಾಗೊಳಿಸಿದ್ದಕ್ಕಾಗಿ ಗೊಗೊಯಿ ವಿರುದ್ಧ ಆಂತರಿಕ ವಿಚಾರಣೆಗೆ ಆದೇಶಿಸುವಂತೆ ಕೋರಿ ಅರುಣ್‌ ರಾಮಚಂದ್ರ ಹುಬ್ಳೀಕರ್‌ ಎಂಬವರು ಪಿಐಎಲ್‌ ಸಲ್ಲಿಸಿದ್ದರು. ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ಪ್ರತಿವಾದಿಯನ್ನಾಗಿಸಿ ಪಿಐಎಲ್‌ ಸಲ್ಲಿಸಿದ್ದಕ್ಕೆ ಸುಪ್ರೀಂಕೋರ್ಟ್‌, ಈ ಹಿಂದೆ ಅಸಮಾಧಾನ ಹೊರಹಾಕಿತ್ತು.

‘ನ್ಯಾಯಮೂರ್ತಿಯೊಬ್ಬರನ್ನು ಪ್ರತಿವಾದಿಯನ್ನಾಗಿಸಿ ನೀವು ಪಿಐಎಲ್ ಸಲ್ಲಿಸಿದ್ದು ಹೇಗೆ’ ಎಂದು ಸುಪ್ರೀಂ ಕೋರ್ಟ್‌ ಪೀಠ, ಸೆಪ್ಟೆಂಬರ್‌ 30ರಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತ್ತು. 

ಮಂಗಳವಾರದ ವಿಚಾರಣೆ ವೇಳೆ ಹುಬ್ಳೀಕರ್‌ ಅವರು, ಮತ್ತೆ ಗೊಗೊಯಿ ಹೆಸರನ್ನು ಪ್ರಸ್ತಾಪಿಸಿದರು. ಅದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ‘ನಿಮ್ಮ ಮೇಲೆ ದಂಡ ವಿಧಿಸುತ್ತೇವೆ. ಯಾವುದೇ ನ್ಯಾಯಾಧೀಶರ ಹೆಸರು ಪ್ರಸ್ತಾಪಿಸಬೇಡಿ. ನಿಮ್ಮ ಅರ್ಜಿಯಲ್ಲಿ ಏನೂ ಇಲ್ಲ’ ಎಂದಿತು. 

ಅದಕ್ಕೆ ಅರ್ಜಿದಾರ, ‘ನನ್ನ ಪ್ರಕರಣದಲ್ಲಿ ಏನೂ ಇಲ್ಲ ಎಂದು ನೀವು ಹೇಗೆ ಹೇಳುತ್ತೀರಿ. ನನಗೆ ಅನ್ಯಾಯವಾಗಿದೆ. ಕನಿಷ್ಠ ಸಾವಿಗೆ ಮುನ್ನವಾದರೂ ನನಗೆ ನ್ಯಾಯ ಸಿಗಬೇಕು’ ಎಂದು ವಾದಿಸಿದರು.

ನಿಮ್ಮ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಹೇಳಿದ ಪೀಠ, ಅರ್ಜಿದಾರರನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ಯುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿತು.

ಗೊಗೊಯಿ ಅವರ ಹೆಸರನ್ನು ಪ್ರತಿವಾದಿಗಳ ಪಟ್ಟಿಯಿಂದ ಕೈಬಿಡುವಂತೆ ಅರ್ಜಿದಾರರಿಗೆ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ಈ ಹಿಂದೆ ಸೂಚಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.