ಈಟ್ವಾ (ಉತ್ತರ ಪ್ರದೇಶ): ಸಬ್ ಇನ್ಸ್‌ಪೆಕ್ಟರ್ ಒಬ್ಬರನ್ನು65 ಕಿ.ಮೀಟರ್ ದೂರದ ಠಾಣೆಯೊಂದಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದನ್ನು ಪ್ರತಿಭಟಿಸಿ ಅವರು ಆ ಠಾಣೆಗೆ ಜಾಗಿಂಗ್ ಮೂಲಕವೇ ಹೋಗಿ ಸುಸ್ತಾಗಿ ಆಸ್ಪತ್ರೆ ಸೇರಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಪೊಲೀಸ್ ಲೈನ್ ಠಾಣೆಯಿಂದ ಸಬ್ ಇನ್ಸ್‌ಪೆಕ್ಟರ್ ವಿಜಯ್ ಪ್ರತಾಪರನ್ನು 65 ಕಿ.ಮೀ ದೂರ ಇರುವ ಬಿಥುಲಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಬಿಥುಲಿಗೆ ಬರಿಗಾಲಿನಲ್ಲೇ ಓಡಿದ್ದರು. ಇದರಿಂದ ತೀವ್ರವಾಗಿ ಬಳಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿಂದೆ ವಿಜಯ್ ಪ್ರತಾಪ್ ಅವರು ವರ್ಗಾವಣೆ ಬೇಡ ಎಂದು ಹಿರಿಯ ಪೊಲೀಸ್ ಅಧಿಕಾರಿ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ್ದ ಅಧಿಕಾರಿಗಳು ವರ್ಗಾವಣೆಯನ್ನು ತಡೆಹಿಡಿದಿದ್ದರು. ಆದರೂ ಸ್ಥಳೀಯ ಸರ್ಕಲ್ ಇನ್ಸ್‌ಪೆಕ್ಟರ್ ಬಲವಂತವಾಗಿ ವರ್ಗಾವಣೆ ಮಾಡಿದ್ದರು ಎಂದು ವಿಜಯ್ ಪ್ರತಾಪ್ ಆರೋಪಿಸಿದ್ದಾರೆ.
ಅವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಕಾಲ್ನಡಿಗೆಯ ಪ್ರತಿಭಟನೆ ಮಾಡಿದ್ದೇನೆ ಎಂದು ವಿಜಯ ಪ್ರತಾಪ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.