ADVERTISEMENT

ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣ: ಆರೋಪಿ ಮಿಹಿರ್‌ ಶಾ ತಪ್ಪೊಪ್ಪಿಗೆ

ಪ್ರಕರಣ ಮುಚ್ಚಿ ಹಾಕಲು ಯತ್ನ–ಸರ್ಕಾರದ ವಿರುದ್ಧ ವಿಪಕ್ಷಗಳ ಟೀಕೆ

ಪಿಟಿಐ
Published 10 ಜುಲೈ 2024, 16:05 IST
Last Updated 10 ಜುಲೈ 2024, 16:05 IST
ರಾಜೇಶ್‌ ಶಾ
ರಾಜೇಶ್‌ ಶಾ   

ಮುಂಬೈ: ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣದ ಪ್ರಮುಖ ಆರೋಪಿ ಮಿಹಿರ್‌ ಶಾ, ಅಪಘಾತ ಸಂಭವಿಸಿದ ದಿನ ತಾನು ಕಾರು ಚಲಾಯಿಸುತ್ತಿದ್ದುದಾಗಿ ಬುಧವಾರ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸದ್ಯ, ಅವರನ್ನು ನ್ಯಾಯಾಲಯವು ಜುಲೈ 16ರ ವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಭಾನುವಾರ ನಸುಕಿನಲ್ಲಿ ಈ ಅಪಘಾತ ಸಂಭವಿಸಿದೆ. ಮಿಹಿರ್‌ ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದ್ದು, ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡಿದ ಪರಿಣಾಮ ಹಿಂಬದಿ ಸವಾರರಾದ ಕಾವೇರಿ ನಖ್ವಾ (45) ಮೃತಪಟ್ಟಿದ್ದರು. ಅವರ ಪತಿ ಪ್ರದೀಪ್‌ ನಖ್ವಾ(50) ಅವರಿಗೆ ಗಾಯಗಳಾಗಿವೆ.

ADVERTISEMENT

ಮಿಹಿರ್‌ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿ, ಚೀಫ್‌ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಎಸ್‌.ಪಿ.ಭೋಸಲೆ ಅವರ ಮುಂದೆ ಹಾಜರುಪಡಿಸಿದ್ದರು. 

ಮಿಹಿರ್‌ ವಿರುದ್ಧ ವರ್ಲಿ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರು ವಾಹನಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ಮಿಹಿರ್‌ ತಂದೆ, ಶಿವಸೇನಾ (ಶಿಂದೆ ಬಣ) ಮುಖಂಡ ರಾಜೇಶ್‌ ಶಾ ಅವರನ್ನು ಸಹ ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಕಾರು ಚಾಲಕ ಬಿದಾವತ್ ಅವರನ್ನು ಗುರುವಾರದ ವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ವಿಪಕ್ಷಗಳ ಟೀಕೆ: ಕಾರು ಅಪಘಾತ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆ ಎಂದು ವಿಪಕ್ಷಗಳ ಒಕ್ಕೂಟ ಮಹಾ ವಿಕಾಸ ಅಘಾಡಿ (ಎಂವಿಎ) ಟೀಕಿಸಿದೆ.

‘ಇಡೀ ಪ್ರಕರಣವನ್ನು ದುರ್ಬಲಗೊಳಿಸಲು ಸರ್ಕಾರ ಮತ್ತು ಪೊಲೀಸರಿಂದ ಯತ್ನ ನಡೆದಿದೆ. ಪೊಲೀಸರೇ ಆರೋಪಿಯನ್ನು ಅಡಗಿಸಿ ಇಟ್ಟಿದ್ದರು. ಎರಡು ಬಾರಿ ಪರೀಕ್ಷೆ ನಂತರವೂ ಆರೋಪಿಯ ರಕ್ತ ಮಾದರಿಯಲ್ಲಿ ಅಲ್ಕೋಹಾಲ್‌ ಅಂಶ ಕಂಡುಬರದೇ ಇದ್ದಾಗ ಆತನನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ’ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ವಿಜಯ ವಡೆಟ್ಟಿವಾರ್ ಆರೋಪಿಸಿದ್ದಾರೆ.

ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

‘ಈ ಘಟನೆಯನ್ನು ಕೊಲೆ ಎಂಬುದಾಗಿ ಪರಿಗಣಿಸಿ, ಆರೋಪಿ ಮಿಹಿರ್‌ಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಶಿವಸೇನಾ(ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ಆಗ್ರಹಿಸಿದ್ದಾರೆ.

ಗ್ಲೋಬಲ್ ತಪಸ್ ಬಾರ್‌ನ ಅನಧಿಕೃತ ಭಾಗವನ್ನು ತೆರವುಗೊಳಿಸಿದ ಬೃಹನ್‌ಮುಂಬೈ ಮಹಾನಗರ ಪಾಲಿಕೆ ಆಡಳಿತ –ಪಿಟಿಐ ಚಿತ್ರ

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನದಿಂದ ಶಾ ವಜಾ

ಮುಂಬೈ: ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣದ ಪ್ರಮುಖ ಆರೋಪಿ ಮಿಹಿರ್‌ ಶಾ ಅವರ ತಂದೆ ರಾಜೇಶ್ ಶಾ ಅವರನ್ನು ಶಿವಸೇನಾದ ಪಾಲ್ಘರ್ ಜಿಲ್ಲಾ ಘಟಕದ ಉಪಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಅಪಘಾತದ ಕುರಿತಂತೆ ಕಟು ಟೀಕೆಗಳು ವ್ಯಕ್ತವಾಗಿದ್ದರಿಂದ ಶಿವಸೇನಾದ ಮುಖ್ಯಸ್ಥರೂ ಆಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಬುಧವಾರ ರಾಜೇಶ್‌ ಶಾ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.  

ಶಾ ಅವರನ್ನು ಪಕ್ಷದ ಉಪಾಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಶಿವಸೇನಾದ ಕಾರ್ಯದರ್ಶಿ ಸಂಜಯ್ ಮೋರೆ ಒಂದು ವಾಕ್ಯದ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಉಪಾಧ್ಯಕ್ಷ ಸ್ಥಾನದಿಂದ ವಜಾಗೊಂಡರೂ ರಾಜೇಶ್ ಶಿವಸೇನಾದ ಸದಸ್ಯರಾಗಿ ಮುಂದುವರಿದಿದ್ದಾರೆ.

ಬಾರ್‌ನ ಅನಧಿಕೃತ ಭಾಗ ನೆಲಸಮ

ಮುಂಬೈ: ವರ್ಲಿಯಲ್ಲಿ ಈಚೆಗೆ ಸಂಭವಿಸಿದ್ದ ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾಗೆ ನಿಯಮಾವಳಿ ಉಲ್ಲಂಘಿಸಿ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿದ್ದ ಬಾರ್‌ನ ಅನಧಿಕೃತ ನವೀಕರಣಗೊಂಡ ಭಾಗವನ್ನು ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆಡಳಿತವು ಬುಧವಾರ ತೆರವುಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜುಹು ಉಪನಗರದಲ್ಲಿರುವ ವೈಸ್‌–ಗ್ಲೋಬಲ್‌ ತಪಸ್‌ ಬಾರ್‌ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. 3500 ಚದರಡಿ ಪ್ರದೇಶದಲ್ಲಿನ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.