ಮುಂಬೈ: ಈಚೆಗೆ ಸಂಭವಿಸಿದ ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಪ್ರಮುಖ ಆರೋಪಿ ಮಿಹಿರ್ ಶಾ ಅಪಘಾತವಾದ ಬಳಿಕ ತನ್ನ ಗೆಳತಿಗೆ 40 ಸಲ ಮೊಬೈಲ್ ಕರೆ ಮಾಡಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.
ಮಿಹಿರ್ ಶಾ ಶಿವಸೇನಾ (ಶಿಂದೆ ಬಣ) ಮುಖಂಡ ರಾಜೇಶ್ ಶಾ ಅವರ ಪುತ್ರ. ಈ ಘಟನೆಯ ಬಳಿಕ ರಾಜೇಶ್ ಶಾನನ್ನು ಪಕ್ಷದಿಂದ ವಜಾಗೊಳಿಸಲಾಗಿದೆ.
ಮಿಹಿರ್ ಶಾ ಚಾಲನೆ ಮಾಡುತ್ತಿದ್ದರು ಎನ್ನಲಾದ ಬಿಎಂಡಬ್ಲ್ಯು ಕಾರು ಮುಂಬೈನ ವರ್ಲಿ ಪ್ರದೇಶದಲ್ಲಿ ಭಾನುವಾರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದು, ಆಕೆಯ ಪತಿ ಗಾಯಗೊಂಡಿದ್ದರು. ಮೃತರನ್ನು ವರ್ಲಿ ನಿವಾಸಿ ಕಾವೇರಿ ನಖವಾ (45) ಎಂದು ಗುರುತಿಸಲಾಗಿದ್ದು, ಅವರ ಪತಿ ಪ್ರದೀಕ್ ನಖವಾ (50) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.
ಅಪಘಾತದ ಬಳಿಕ ಮಿಹಿರ್ ಶಾ ತನ್ನ ಗೆಳತಿಗೆ 40 ಸಲ ಕರೆ ಮಾಡಿದ್ದ ಎಂಬುದು ತನಿಖೆಯ ವೇಳೆ ಗೊತ್ತಾಗಿದೆ. ಇವನ ಗೆಳತಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮದ್ಯ ಕುಡಿದು ಕಾರು ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾರು ಅಪಘಾತಕ್ಕೀಡಾದ ನಂತರ ತಲೆಮರೆಸಿಕೊಂಡಿದ್ದ ಮಿಹಿರ್ ಶಾನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದರು. ಆರೋಪಿಯ ಬಂಧನಕ್ಕಾಗಿ 11 ತಂಡಗಳನ್ನು ರಚಿಸಿದ್ದ ಪೊಲೀಸರು, ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.
ಈ ಘಟನೆಯು ಮಹಾರಾಷ್ಟ್ರದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.