ಇಂಫಾಲ್: ಮಣಿಪುರದ ತೆಂಗ್‌ನೌಪಾಲ್ ಜಿಲ್ಲೆಯ ಮೋರೆ ಎಂಬಲ್ಲಿ ಭದ್ರತಾ ಪಡೆಗಳು ಹಾಗೂ ಬಂಡುಕೋರರ ನಡುವಿನ ಗುಂಡಿನ ಕಾಳಗದಲ್ಲಿ ಸೇನೆಯ ಮತ್ತೊಬ್ಬ ಸಿಬ್ಬಂದಿ ಮೃತಪಟ್ಟಿದ್ದು, ಸತ್ತವರ ಸಂಖ್ಯೆ ಎರಡಕ್ಕೆ ಏರಿದಂತಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಈ ಗುಂಡಿನ ಕಾಳಗದಲ್ಲಿ ಮತ್ತಿಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದೂ ತಿಳಿಸಿದ್ಧಾರೆ.
ಮೃತರನ್ನು ಪಶ್ಷಿಮ ಇಂಫಾಲ್ ಜಿಲ್ಲೆಯ ತಖೇಲ್ಲಂಬಮ್ ಶೈಲೇಶ್‌ವೋರೆ ಎಂದು ಗುರುತಿಸಲಾಗಿದೆ.
ಇದಕ್ಕೂ ಮುನ್ನ, ಇಮಾ ಕೊಂಡೊಂಗ್ ಲೈರೆಂಬಿ ದೇವಿ ದೇವಸ್ಥಾನ ಬಳಿ ನಡೆದ ಹೊಂಚು ದಾಳಿಯಲ್ಲಿ ವಾಂಗ್‌ಖೆಮ್ ಸಮರ್‌ಜಿತ್ ಎಂಬ ಪೊಲೀಸ್ ಅಧಿಕಾರಿಗೆ ಗುಂಡು ತಗುಲಿತ್ತು. ಅವರನ್ನು ಅಸ್ಸಾಂ ರೈಫಲ್ಸ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರಿಂದ ರಸ್ತೆ ತಡೆ: ಮೋರೆ ಪಟ್ಟಣದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪೊಲೀಸರ ಹತ್ಯೆ ಆಗಿದ್ದನ್ನು ಖಂಡಿಸಿ ಪಶ್ಚಿಮ ಇಂಫಾಲ್ ಜಿಲ್ಲೆಯ ಮಾಲೋಮ್ ಎಂಬಲ್ಲಿ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು.
ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು. ಅಂತ್ಯಕ್ರಿಯೆ ವೇಳೆ ಧರಿಸುವ ಸಾಂಪ್ರದಾಯಿಕ ವಸ್ತ್ರ ಧರಿಸಿದ್ದ ಮಹಿಳೆಯರು ರಸ್ತೆಯಲ್ಲಿ ಕುಳಿತು, ವಾಹನಗಳ ಸಂಚಾರವನ್ನು ತಡೆದರು.
ಇಂಫಾಲ್ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಮೀರಾ ಪೈಬೀಸ್ ಸಂಘಟನೆಯ ಸದಸ್ಯೆಯರು ಬೃಹತ್ ರ‍್ಯಾಲಿ ನಡೆಸಿದರು. ಮುಖ್ಯಮಂತ್ರಿ ನಿವಾಸದತ್ತ ತೆರಳುತ್ತಿದ್ದ ಅವರನ್ನು ಪೊಲೀಸರು ಮಧ್ಯದಲ್ಲಿಯೇ ತಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.