ನವದೆಹಲಿ: ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ನೀಡಿಕೆ ಒಂದು ಭಾಗಶಃ ಪರಿಹಾರ ಮಾತ್ರ. ಅದರ ಬದಲಿಗೆ ಕೃಷಿ ಉತ್ಪನ್ನಗಳನ್ನು ಮಂಡಿಗಳಲ್ಲಿ ಹರಾಜು ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ಹರಾಜಿಗೆ ಕನಿಷ್ಠ ಬೆಂಬಲ ನಿಗದಿ ಮಾಡಬೇಕು ಎಂದು ನೀತಿ ಆಯೋಗ ಶಿಫಾರಸು ಮಾಡಿದೆ.
2022ರೊಳಗೆಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವುದಕ್ಕಾಗಿ‘75ರಲ್ಲಿ ನವಭಾರತದ ಕಾರ್ಯತಂತ್ರ’ ಎಂಬ ವರದಿಯಲ್ಲಿ ಹಲವು ಸಲಹೆಗಳನ್ನು ನೀತಿ ಆಯೋಗವು ನೀಡಿದೆ.
ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ (ಸಿಎಸಿಪಿ) ಬದಲಿಗೆ ಕೃಷಿ ನ್ಯಾಯಮಂಡಳಿ ಸ್ಥಾಪಿಸಬೇಕು. ಇದಕ್ಕೆ ಸಂವಿಧಾನದ 323ಬಿ ವಿಧಿಯಲ್ಲಿ ಅವಕಾಶ ಇದೆ ಎಂದು ಆಯೋಗ ಹೇಳಿದೆ. ಸಿಎಸಿಪಿ ಸರ್ಕಾರದ ಸಲಹಾ ಸಮಿತಿ. ಈ ಸಮಿತಿಯು 22 ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಸಾಮಾನ್ಯವಾಗಿ ಸಿಎಸಿಪಿಯ ಶಿಫಾರ ಸನ್ನು ಸರ್ಕಾರ ಅಂಗೀಕರಿಸುತ್ತದೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಬದಲಿಗೆ ಕನಿಷ್ಠ ಮೀಸಲು ಬೆಲೆ (ಎಂಆರ್‌ಪಿ) ವ್ಯವಸ್ಥೆ ಜಾರಿಯ ಸಾಧ್ಯತೆಗಳನ್ನು ಪರಿಶೀಲಿಸಲು ನೀತಿ ಆಯೋಗವು ಸಮಿತಿಯೊಂದನ್ನು ರಚಿಸಬೇಕು ಎಂದೂ ವರದಿಯಲ್ಲಿ ಹೇಳಲಾಗಿದೆ.
ಎಂಎಸ್‌ಪಿ ನಿರ್ಧಾರಕ್ಕೆ ಸಂಬಂಧಿಸಿ ಮೂರು ಮಾನದಂಡಗಳ ಬಗ್ಗೆಯೂ ಈ ಸಮಿತಿ ಪರಿಶೀಲನೆ ನಡೆಸಬೇಕು. ಹೆಚ್ಚುವರಿ ಉತ್ಪಾದನೆ, ದೇಶೀ ಮಾರುಕಟ್ಟೆಯಲ್ಲಿ ಕೊರತೆ ಇದ್ದರೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯತೆ ಮತ್ತು ದೇಶೀ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳೆರಡಲ್ಲೂ ಕೊರತೆ ಇರುವ ವಸ್ತುಗಳು ಎಂಬುದೇ ಆ ಮಾನದಂಡಗಳಾಗಿವೆ.
**
ಯುಪಿಎಸ್‌ಸಿ: ವಯೋಮಿತಿ 27ಕ್ಕೆ ಇಳಿಸಿ
ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರೆಯುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನಿಗದಿಪಡಿಸಲಾದ ಗರಿಷ್ಠ ವಯೋಮಿತಿಯನ್ನು 30 ವರ್ಷದಿಂದ 27 ವರ್ಷಕ್ಕೆ ಇಳಿಸುವಂತೆ ನೀತಿ ಆಯೋಗ ಸಲಹೆ ಮಾಡಿದೆ.
2022–23 ವೇಳೆಗೆ ಹಂತ ಹಂತವಾಗಿ ಗರಿಷ್ಠ ವಯೋಮಿತಿ ನಿಯಮವನ್ನು ಪರಿಷ್ಕರಿಸುವಂತೆ ಆಯೋಗ ಹೇಳಿದೆ.
ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತ್ಯೇಕವಾಗಿ ನಡೆಯುತ್ತಿರುವ 60ಕ್ಕೂ ಹೆಚ್ಚು ನಾಗರಿಕ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರದ್ದುಗೊಳಿಸುವಂತೆಯೂ ಆಯೋಗ ಸಲಹೆ ಮಾಡಿದೆ.
ಅದರ ಬದಲು ಒಂದೇ ಪರೀಕ್ಷೆ ಮೂಲಕ ರ‍್ಯಾಂಕ್‌ಗಳಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ವಿವಿಧ ಸೇವೆಗಳಿಗೆ ಆಯ್ಕೆ ಮಾಡುವ ಪದ್ಧತಿ ಜಾರಿಗೆ ತರುವಂತೆ ಸೂಚಿಸಿದೆ.
**
ಸಲಹೆಗಳು
* ಎಂಎಸ್‌ಪಿ ಮೂಲಕ ರೈತರಿಗೆ ಲಾಭದಾಯಕ ಬೆಲೆ ಕೊಡಿಸುವುದು ಭಾಗಶಃ ಮಾತ್ರ ಸಾಧ್ಯ
* ಸ್ಪರ್ಧಾತ್ಮಕ, ಸುಸ್ಥಿರ, ರಾಷ್ಟ್ರೀಯ ಮಾರುಕಟ್ಟೆ ರೂಪಿಸಬೇಕು; ರಫ್ತು ಪೂರಕವಾದ ವ್ಯವಸ್ಥೆ ಸ್ಥಾಪನೆಯಾಗಬೇಕು
* ಕೃಷಿಯುತ್ಪನ್ನ ರಫ್ತಿಗಾಗಿ ಸಮಗ್ರ ಮತ್ತು ಸ್ಥಿರ ನೀತಿ ರೂಪಿಸಬೇಕು
* ದೇಶದ ಆಹಾರ ಭದ್ರತೆ ಜತೆಗೆ ರೈತರಿಗೆ ಆದಾಯ ಸುರಕ್ಷತೆಗೆ ಪೂರಕ ವಾತಾವರಣ ಸೃಷ್ಟಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.