ನವದೆಹಲಿ: ಸಚಿವೆ ಅತಿಶಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಹರಿಯಾಣ ಸರ್ಕಾರದ ವಿರುದ್ಧ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಇಲ್ಲಿಗೆ ಅಂತ್ಯಗೊಳಿಸಲಾಗಿದೆ ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ತಿಳಿಸಿದರು.
ಸುದ್ದಿಸಂಸ್ಥೆ ಪಿಟಿಐನೊಂದಿಗೆ ಮಾತನಾಡಿದ ಸಿಂಗ್, ‘ಒಪ್ಪಂದದ ಪ್ರಕಾರ ಹರಿಯಾಣ ಸರ್ಕಾರ ದೆಹಲಿಗೆ ನೀರು ಬಿಡಬೇಕು ಎಂದು ಒತ್ತಾಯಿಸಿರುವ ಅತಿಶಿ ಕಳೆದ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು’ ಎಂದು ಹೇಳಿದರು.
‘ದೆಹಲಿಗೆ ಹರಿಯಾಣ ಸರ್ಕಾರ ದಿನಕ್ಕೆ 100 ಮಿಲಿಯನ್ ಗ್ಯಾಲನ್ ನೀರು ಬಿಡದ ಕಾರಣ ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ಉಂಟಾಗಿದೆ. ಈ ಬಗ್ಗೆ ಅತಿಶಿ ಅವರು ಹರಿಯಾಣ ಸರ್ಕಾರದೊಂದಿಗೆ ಮಾತನಾಡಿದ್ದಾರೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರೊಂದಿಗೂ ಚರ್ಚಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದ್ದಾರೆ’ ಎಂದರು.
‘ಉಪವಾಸ ಕುಳಿತುಕೊಳ್ಳುವ ಮೊದಲು ಅತಿಶಿ ಅವರ ತೂಕ 65.8 ಕೆ.ಜಿ ಇತ್ತು. ಉಪವಾಸ ಆರಂಭಿಸಿದ ನಂತರ ಅವರ ತೂಕ 63.6 ಕೆ.ಜಿಗೆ ಇಳಿದಿತ್ತು. ಕೇವಲ ನಾಲ್ಕೇ ದಿನಕ್ಕೆ 2.2 ಕೆ.ಜಿ ಅಷ್ಟು ತೂಕ ಕಳೆದುಕೊಂಡಿದ್ದಾರೆ. ಇದರೊಂದಿಗೆ ಅವರ ರಕ್ತದೊತ್ತಡದ ಮಟ್ಟವೂ ಕಡಿಮೆಯಾಗಿದೆ’ ಎಂದರು.
‘ರಕ್ತದಲ್ಲಿನ ಸಕ್ಕರೆ ಮಟ್ಟವು ತೀವ್ರವಾಗಿ ಕುಸಿದಿದೆ. ದೇಹದಲ್ಲಿ ಕೆಟೋನ್ ಮಟ್ಟವೂ ಹೆಚ್ಚುತ್ತಿದ್ದು, ಅತಿಶಿ ಅವರ ಆರೋಗ್ಯ ಸ್ಥಿತಿ ಅಪಾಯದ ಮಟ್ಟದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಸಿಂಗ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.