ADVERTISEMENT

ಪೊಖ್ರಾನ್‍ನ ಶಿವ ದೇಗುಲದಲ್ಲಿ ಪೂಜೆ ನೆರವೇರಿಸಿದ ರಾಜಸ್ಥಾನದ ಮುಸ್ಲಿಂ ಸಚಿವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 10:17 IST
Last Updated 2 ಜನವರಿ 2019, 10:17 IST
ಪೂಜೆ ಸಲ್ಲಿಸುತ್ತಿರುವ ಸಲೇಹ್  (ಕೃಪೆ: ಹಿಂದೂಸ್ತಾನ್ ಟೈಮ್ಸ್)
ಪೂಜೆ ಸಲ್ಲಿಸುತ್ತಿರುವ ಸಲೇಹ್ (ಕೃಪೆ: ಹಿಂದೂಸ್ತಾನ್ ಟೈಮ್ಸ್)   

ಬಡಾಮೇರ್: ರಾಜಸ್ಥಾನದ ಸಚಿವ ಸಲೇಹ್ ಮೊಹಮ್ಮದ್ ಜೈಸಲ್ಮೇರ್ ಜಿಲ್ಲೆಯ ಪೊಖ್ರಾನ್‍ನ ಶಿವ ದೇಗುಲದಲ್ಲಿ ಭಾನುವಾರ ಪೂಜೆ ಸಲ್ಲಿಸಿದ್ದಾರೆ.

ಮುಸ್ಲಿಂ ಸಮುದಾಯದ ನಾಯಕ ಘಾಜಿ ಫಕೀರ್ ಅವರ ಮಗ ಸಲೇಹ್ ಮೊಹಮ್ಮದ್, ಗೆಹ್ಲೋಟ್ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ದೇವಾಲಯಲ್ಲಿ ಪೂಜೆ ನೆರವೇರಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಸಲೇಹ್ ಅವರು ದೇವಸ್ಥಾನಕ್ಕೆ ಬಂದು ಪೂಜೆ ನೆರವೇರಿಸಿದ ವರದಿಯನ್ನು ದೇವಾಲಯದ ಅರ್ಚಕ ಮಧು ಚಂಗಾನಿ ದೃಢೀಕರಿಸಿದ್ದಾರೆ.ಮೊಹಮ್ಮದ್ ದೇವಾಲಯಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಚುನಾವಣೆ ಸಮಯದಲ್ಲಿಯೂ ಅವರು ಇಲ್ಲಿಗೆ ಬಂದಿದ್ದರು ಎಂದಿದ್ದಾರೆ ಚಂಗಾನಿ.

ದೇವಾಲಯಕ್ಕೆ ಬಂದ ಮೊಹಮ್ಮದ್, ಹಿಂದೂ ಸಂಪ್ರದಾಯದಂತೆ ಅರ್ಧ ಗಂಟೆಗಳ ಕಾಲ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಅವರು ದೇವಾಲಯಕ್ಕೆ ಬಂದು ಪುಣ್ಯಸ್ನಾನ ಮಾಡಿ ಶಿವಲಿಂಗಕ್ಕೆ ಜೇನುತುಪ್ಪ ಮತ್ತು ಹಾಲು ಅಭಿಷೇಕ ಮಾಡಿದ್ದಾರೆ.

ADVERTISEMENT

ಪೂಜೆ ನೆರೆವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಲೇಹ್, ಧರ್ಮ ಸಾಮರಸ್ಯಕ್ಕೆ ಪಶ್ಚಿಮ ರಾಜಸ್ಥಾನ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ಹಿಂದೂ ಮತ್ತು ಮುಸ್ಲಿಮರು ಬಾಬಾ ರಾಮ್‍ದೇವ್ ಜೀ (ರಾಮದೇವರಾ ಎಂಬ ದೇಗುಲದ ಬಾಬಾ ರಾಮದೇವ್ ದೇವರು) ಮೇಲೆ ನಂಬಿಕೆ ಇಟ್ಟಿದ್ದಾರೆ.ನನ್ನ ನಂಬಿಕೆಯಿಂದಾಗಿ ನಾನು ದೇವಾಲಯಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.