ADVERTISEMENT

ಎನ್‌ಜಿಒಗಳಿಗೆ ವಿದೇಶಿ ದೇಣಿಗೆ ಬಗ್ಗೆ ಸಚಿವಾಲಯ ವಿವರಣೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 16:14 IST
Last Updated 11 ನವೆಂಬರ್ 2024, 16:14 IST
ವಿದೇಶಿ ದೇಣಿಗೆ–ಪ್ರಾತಿನಿಧಿಕ ಚಿತ್ರ
ವಿದೇಶಿ ದೇಣಿಗೆ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಅಭಿವೃದ್ಧಿ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ, ಬಲವಂತದ ಮತಾಂತರ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ಭಯೋತ್ಪಾದಕ ಅಥವಾ ತೀವ್ರಗಾಮಿ ಸಂಘಟನೆಗಳ ಜೊತೆ ನಂಟು ಹೊಂದಿರುವ ಎನ್‌ಜಿಒಗಳು ವಿದೇಶಿ ದೇಣಿಗೆ ಸಂಗ್ರಹಿಸುವುದನ್ನು ತಡೆಯಲು ಅವಕಾಶ ಇದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ವಿದೇಶಗಳಿಂದ ದೇಣಿಗೆ ಸಂಗ್ರಹಿಸುವುದಕ್ಕೆ ಅನುಮತಿ ನಿರಾಕರಿಸಲು ನೀಡುವ ಕಾರಣಗಳು ಸ್ಪಷ್ಟವಾಗಿಲ್ಲ ಎಂಬ ಆರೋಪಗಳ ನಡುವೆ ಸಚಿವಾಲಯವು ಈ ವಿವರಣೆ ನೀಡಿದೆ.

ನವೆಂಬರ್ 8ರಂದು ಹೊರಡಿಸಿರುವ ವಿವರಣೆಯಲ್ಲಿ ಸಚಿವಾಲಯವು, ಕೆಟ್ಟ ಉದ್ದೇಶದಿಂದ ಪ್ರತಿಭಟನೆಗಳಿಗೆ ಪ್ರಚೋದನೆ ನೀಡುವ ಕೆಲಸದಲ್ಲಿ ತೊಡಗಿರುವ ಎನ್‌ಜಿಒಗಳು, ನಿಗದಿತ ಗುರಿ ಹಾಗೂ ಉದ್ದೇಶಗಳಿಗೆ ಅನುಗುಣವಾಗಿ ವಿದೇಶಿ ದೇಣಿಗೆಯನ್ನು ಬಳಕೆ ಮಾಡುತ್ತಿಲ್ಲದ ಎನ್‌ಜಿಒಗಳು, ಸತತ ಆರು ಹಣಕಾಸಿನ ವರ್ಷಗಳವರೆಗೆ ಲೆಕ್ಕ ನೀಡದ ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯನ್ನು ರದ್ದುಮಾಡಬಹುದು ಎಂದು ಹೇಳಿದೆ.

ADVERTISEMENT

ವಿದೇಶಗಳಿಂದ ದೇಣಿಗೆ ಪಡೆಯಬೇಕು ಎಂದಾದರೆ ಎನ್‌ಜಿಒಗಳು ಎಫ್‌ಸಿಆರ್‌ಎ ಅಡಿ ನೋಂದಣಿ ಮಾಡಿಕೊಳ್ಳಲೇಬೇಕು. ಸ್ವೀಕರಿಸುವ ವಿದೇಶಿ ದೇಣಿಗೆಯು ಸಾಮಾಜಿಕ ಹಾಗೂ ಧಾರ್ಮಿಕ ಸೌಹಾರ್ದಕ್ಕೆ ಧಕ್ಕೆ ತರಬಹುದು ಎಂಬ ಮಾಹಿತಿ ಅಧಿಕಾರಿಗಳಿಗೆ ಇದ್ದರೆ, ಅಂತಹ ಎನ್‌ಜಿಒಗಳು ಕ್ರಮ ಎದುರಿಸಬೇಕಾಗಬಹುದು ಎಂದು ಸಚಿವಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.