ನವದೆಹಲಿ: ದೇಶ ವಿರೋಧಿ ಚಟುವಟಿಕೆಗಳ ಆರೋಪದಡಿ ಮೈತೇಯಿ ಸಮುದಾಯದ ಏಳು ಸಂಘಟನೆಗಳು, ಅವುಗಳ ನಾಲ್ಕು ಅಂಗಸಂಸ್ಥೆಗಳನ್ನು ಐದು ವರ್ಷಗಳಿಗೆ ಕೇಂದ್ರ ಸರ್ಕಾರ ನಿಷೇಧಿಸಿದೆ.
ಈ ಸಂಘಟನೆಗಳ ಕಾರ್ಯ ಚಟುವಟಿಕೆಗಳು ದೇಶದ ಸಾರ್ವಭೌಮತೆ ಮತ್ತು ಏಕತೆಗೆ ಸವಾಲು ಒಡ್ಡಿದ್ದವು. ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರ ಮೇಲಿನ ಹಲ್ಲೆ ಕೃತ್ಯಗಳಲ್ಲೂ ಈ ಸಂಘಟನೆಗಳು ಭಾಗಿಯಾಗಿದ್ದವು ಎಂದು ಸರ್ಕಾರ ತಿಳಿಸಿದೆ.
ಕೇಂದ್ರ ಗೃಹ ಸಚಿವಾಲಯವು ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಆ ಪ್ರಕಾರ, ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ), ಅದರ ರಾಜಕೀಯ ಘಟಕ ಆರ್‌ಪಿಎಫ್, ಸಂಯುಕ್ತ ರಾಷ್ಟ್ರೀಯ ಮುಕ್ತ ರಂಗ (ಯುಎನ್‌ಎಲ್‌ಎಫ್) ಮತ್ತು ಅದರ ಶಸ್ತ್ರಸಜ್ಜಿತ ಸಂಘಟನೆ ಮಣಿಪುರ ಪೀಪಲ್ಸ್ ಆರ್ಮಿ (ಎಂಪಿಎ), ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೆಪಕ್ (ಪಿಆರ್‌ಎಪಿಕೆ), ಇದರ ಶಸ್ತ್ರಸಜ್ಜಿತ ಸಂಘಟನೆ ರೆಡ್ ಆರ್ಮಿ ನಿಷೇಧಿಸಲಾದ ಪ್ರಮುಖ ಸಂಘಟನೆಗಳು.
ಅಲ್ಲದೆ, ಕಾಂಗ್ಲೆಯಿ ಯವೊಲ್ ಕನ್ಬಾ ಲುಪ್ (ಕೆವೈಕೆಎಲ್), ಕೋಆರ್ಡಿನೇಷನ್ ಕಮಿಟಿ, ಸೋಷಿಯಲಿಸ್ಟ್ ಯೂನಿಟಿ ಕಾಂಗ್ಲೆಪಕ್ (ಎಎಸ್‌ಯುಕೆ) ಸಂಘಟನೆಗಳನ್ನು ಐದು ವರ್ಷಗಳಿಗೆ ನಿಷೇಧಿಸಲಾಗಿದೆ.
ಈ ಸಂಘಟನೆಗಳು ಭಾರತದಿಂದ ಮಣಿಪುರವನ್ನು ಪ್ರತ್ಯೇಕಿಸಿ ಸ್ವತಂತ್ರ ರಾಷ್ಟ್ರ ಮಾಡುವ ಗುರಿ ಹೊಂದಿದ್ದವು. ಇದಕ್ಕೆ ಪೂರಕವಾಗಿ ಜನರಿಗೆ ಪ್ರಚೋದನೆ ನೀಡುತ್ತಿದ್ದು, ಹೋರಾಟವನ್ನು ನಡೆಸುತ್ತಿದ್ದವು ಎಂದೂ ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.