ನವದೆಹಲಿ: ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದುಕೊಂಡು ಹೋಗಬೇಕಾದರೆ ಅವರಿಗೆ ಹೆಲ್ಮೆಟ್ ಮತ್ತು ರಕ್ಷಾಕವಚವನ್ನು ಹಾಕುವುದನ್ನು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಒಂಬತ್ತು ತಿಂಗಳಿನಿಂದ ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಮೋಟಾರ್‌ಸೈಕಲ್‌ನಲ್ಲಿ ಕರೆದೊಯ್ಯುವಾಗ ಈ ನಿಯಮ ಪಾಲಿಸುವುದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಬುಧವಾರ ಕಡ್ಡಾಯಗೊಳಿಸಿದೆ.
'ಕೇಂದ್ರದ ಮೋಟಾರು ವಾಹನಗಳು (ಎರಡನೇ ತಿದ್ದುಪಡಿ) ನಿಯಮಗಳು, 2022' ಪ್ರಕಟಗೊಂಡ ದಿನದಿಂದ ಒಂದು ವರ್ಷಕ್ಕೆ ಈ ನಿಯಮಗಳು ಜಾರಿಯಾಗಲಿವೆ.
'ಮೋಟಾರು ವಾಹನಗಳ ಕಾಯ್ದೆಯ ಸೆಕ್ಷನ್ 129ರ ಅಡಿಯಲ್ಲಿ ಈ ನಿಯಮದ ಅಧಿಸೂಚನೆ ಹೊರಡಿಸಲಾಗಿದೆ. ಅದರ ಪ್ರಕಾರ, ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮೋಟಾರ್‌ಸೈಕಲ್‌ನಲ್ಲಿ ಮಕ್ಕಳು ಪ್ರಯಾಣಿಸುವಾಗ ಅಥವಾ ಕರೆದೊಯ್ಯುವಾಗ ಹೆಲ್ಮೆಟ್, ರಕ್ಷಾಕವಚ ಕಡ್ಡಾಯವಾಗಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಎಲ್ಲ ಸುರಕ್ಷತಾ ಕ್ರಮಗಳ ಜೊತೆಗೆ ಮಕ್ಕಳನ್ನು ಕರೆದೊಯ್ಯುವಾಗ ಮೋಟಾರ್‌ಸೈಕಲ್ ವೇಗವು ಗಂಟೆಗೆ 40 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಸಾಗುವಂತಿಲ್ಲ.
ರಕ್ಷಾಕವಚವನ್ನು ಮಗುವಿಗೆ ಧರಿಸಿರಬೇಕು ಹಾಗೂ ಅದಕ್ಕೆ ಜೊತೆಯಾಗಿರುವ ಪಟ್ಟಿಯನ್ನು ವಾಹನ ಚಾಲನೆ ಮಾಡುವ ವ್ಯಕ್ತಿಯು ಭುಜದ ಮೇಲಿನಿಂದ ಧರಿಸಬೇಕು. ಈ ಮೂಲಕ ಮಗುವಿನ ತಲೆಯ ಕೆಳಗಿನ ದೇಹದ ಭಾಗವು ಸುರಕ್ಷಿತವಾಗಿ ಚಾಲಕನೊಂದಿಗೆ ಜೊತೆಯಾಗಿರಬೇಕು.
ಮಕ್ಕಳ ಸುರಕ್ಷತೆಗೆ ಬಳಸುವ ಹೆಲ್ಮೆಟ್, ಸುರಕ್ಷತಾ ಕವಚಗಳು ಹಗುರವಾಗಿರಬೇಕು, ಹೊಂದಿಸಿಕೊಳ್ಳುವಂತಿರಬೇಕು, ಜಲ ನಿರೋಧಕವಾಗಿರಬೇಕು ಹಾಗೂ ಬಾಳಿಕೆ ಬರುವಂತಿರಬೇಕು ಎಂದು ಸಚಿವಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.