ಕಾನ್ಪುರ(ಉತ್ತರ ಪ್ರದೇಶ): ‘ನೀಟ್’ ತರಬೇತಿಗಾಗಿ ಇಲ್ಲಿನ ಪ್ರಮುಖ ಸಂಸ್ಥೆಯಲ್ಲಿದ್ದ ಬಾಲಕಿಯನ್ನು ಸಂಸ್ಥೆಯ ಇಬ್ಬರು ಶಿಕ್ಷಕರು ಆರು ತಿಂಗಳಿಗೂ ಹೆಚ್ಚು ಒತ್ತೆಯಾಳಾಗಿ ಇರಿಸಿಕೊಂಡು, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಜೀವವಿಜ್ಞಾನ ಬೋಧಕ ಸಾಹಿಲ್ ಸಿದ್ದೀಕಿ ಹಾಗೂ ರಸಾಯನವಿಜ್ಞಾನ ಬೋಧಕ ವಿಕಾಸ್ ಪೋರ್ವಾಲ್ ಎಂಬುವವರನ್ನು ಬಂಧಿಸಲಾಗಿದೆ.
‘ಫತೇಹ್‌ಪುರ ಮೂಲದ ಬಾಲಕಿಗೆ 2022ರ ಡಿಸೆಂಬರ್‌ನಿಂದ ತೊಂದರೆ ಶುರುವಾಯಿತು. ಈ ಕುರಿತು ಬಾಲಕಿ ಠಾಣೆಗೆ ದೂರು ನೀಡಿದ ನಂತರ, ಶುಕ್ರವಾರ ಪ್ರಕರಣ ದಾಖಲಿಸಲಾಗಿದೆ’ ಎಂದು ಇಲ್ಲಿನ ಕಲ್ಯಾಣಪುರ ಠಾಣೆ ಎಸಿಪಿ ಅಭಿಷೇಕ್ ಪಾಂಡೆ ಶನಿವಾರ ತಿಳಿಸಿದ್ದಾರೆ.
‘ಈ ತೊಂದರೆ ಆರಂಭವಾದ ವೇಳೆ ವಿದ್ಯಾರ್ಥಿನಿ 17 ವರ್ಷ ವಯೋಮಾನದಳಾಗಿದ್ದಳು. ಹೀಗಾಗಿ ಬಂಧಿತರ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ಅವಕಾಶಗಳಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ತಿಳಿಸಿದ್ಧಾರೆ.
‘ತರಬೇತಿ ಕೇಂದ್ರದಲ್ಲಿ, ಮತ್ತೊಬ್ಬ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಎರಡು ತಿಂಗಳ ಹಿಂದೆ ಸಿದ್ದೀಕಿಯನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೆ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ’ ಎಂದು ತಿಳಿಸಿದ್ದಾರೆ.
‘2022ರ ಡಿಸೆಂಬರ್‌ನಲ್ಲಿ ಹೊಸ ವರ್ಷಾಚರಣೆಗಾಗಿ ಕಲ್ಯಾಣಪುರದಲ್ಲಿರುವ ತನ್ನ ಸ್ನೇಹಿತನ ಫ್ಲ್ಯಾಟ್‌ಗೆ ಸಿದ್ದೀಕಿ ನನ್ನನ್ನು ಕರೆದಿದ್ದರು. ಇತರ ವಿದ್ಯಾರ್ಥಿಗಳು ಕೂಡ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದ್ದ. ಸ್ಥಳಕ್ಕೆ ಹೋದಾಗ ಸಿದ್ದೀಕಿ ಮಾತ್ರ ಇದ್ದರು’ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ.
‘ಮತ್ತು ಬರುವ ಪದಾರ್ಥಗಳನ್ನು ಬೆರೆಸಿದ್ದ ತಂಪು ಪಾನೀಯ ಕುಡಿಸಿ, ನಂತರ ನನ್ನ ಮೇಲೆ ಅತ್ಯಾಚಾರ ಎಸಗಲಾಯಿತು. ಆ ಕೃತ್ಯದ ವಿಡಿಯೊ ಚಿತ್ರೀಕರಣವನ್ನೂ ಮಾಡಲಾಯಿತು’ ಎಂದು ಆರೋಪಿಸಿದ್ದಾರೆ.
‘ಇದಾದ ನಂತರ, ವಿಕಾಸ್ ಪೋರ್ವಾಲ್ ಹಲವು ತಿಂಗಳ ಕಾಲ ನನ್ನ ಮೇಲೆ ಅತ್ಯಾಚಾರ ಎಸಗಿದ. ನನ್ನ ಕುಟುಂಬಕ್ಕೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಆರು ತಿಂಗಳ ನಂತರ ಕಾನ್ಪುರಕ್ಕೆ ಬಂದ ತಾಯಿ ನನ್ನನ್ನು ಕರೆದುಕೊಂಡು ಹೋದರು’ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.
‘ತರಬೇತಿ ಕೇಂದ್ರದ ಮತ್ತೊಬ್ಬ ವಿದ್ಯಾರ್ಥಿನಿಗೆ ಸಿದ್ದೀಕಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಡಿಯೊ ನೋಡಿದೆ. ಆಗ, ಪೊಲೀಸರಿಗೆ ದೂರು ನೀಡುವ ಧೈರ್ಯ ಮಾಡಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.