ನವದೆಹಲಿ: ಶಾಲಾ ಮಕ್ಕಳಿಗಾಗಿ ತಯಾರಿಸುತ್ತಿದ್ದ ಬಿಸಿಯೂಟದ ಪಾತ್ರೆಯೊಳಗೆ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಮಿರ್ಜಾಪುರದ ಲಾಲ್‌ಗಂಜ್ ಪ್ರದೇಶದ ರಾಂಪುರ ಅತಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಮೂಲ ಶಿಕ್ಷಣ ಅಧಿಕಾರಿ ರಾಮ್‌ಲಿಯಾನ್ ಯಾದವ್ ಮಾತನಾಡಿ, ಶಾಲೆಯಲ್ಲಿದ್ದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಎಡವಿದ್ದರಿಂದಾಗಿ ಬಾಲಕಿ ಎದುರಿನಲ್ಲಿ ಆಹಾರ ತಯಾರಿಸುತ್ತಿದ್ದ ಪಾತ್ರೆಯೊಳಗೆ ಬಿದ್ದಿದ್ದಾಳೆ ಎಂದು ತಿಳಿಸಿದ್ದಾರೆ.
ಬಾಲಕಿ ಅಂಚಲ್, ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಿದ್ದ ಅಂಗನವಾಡಿ ಕೇಂದ್ರಕ್ಕೆ ದಾಖಲಾಗಿದ್ದಳು ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಂಟೇನರ್‌ಗೆ ಬಿದ್ದ ಮಗುವನ್ನು ಶಿಕ್ಷಕರು ಮತ್ತು ಅಡುಗೆಯವರು ಕೂಡಲೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಮಿರ್ಜಾಪುರದ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಶೇ 80ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಬಾಲಕಿಗೆ ಚಿಕಿತ್ಸೆ ಫಲಿಸದೆಸಂಜೆ 5ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾಳೆ.
ಅಡುಗೆ ತಯಾರಿಸುತ್ತಿದ್ದವರ ನಿರ್ಲಕ್ಷ್ಯವೇ ಘಟನೆಗೆ ಕಾರಣ. ಮಗುವು ಪಾತ್ರೆಗೆ ಬೀಳುವುದನ್ನು ಅಡುಗೆ ತಯಾರಿಸುತ್ತಿದ್ದಾತ ಗಮನಿಸಲಿಲ್ಲ. ಏಕೆಂದರೆ ಆಗ ಆತ ಇಯರ್ ಫೋನ್ ಹಾಕಿಕೊಂಡಿದ್ದರು. ವಿಷಯ ತಿಳಿಯುತ್ತಲೇ ಗಾಬರಿಯಾಗಿ ಓಡಿ ಹೋದರು ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ.
ಮಿರ್ಜಾಪುರ ಜಿಲ್ಲಾಧಿಕಾರಿ ಸುಶೀಲ್ ಪಟೇಲ್ ಮಾತನಾಡಿ, ಶಾಲೆಯ ಮುಖ್ಯೋಪಾಧ್ಯಾಯರಾದ ಸಂತೋಷ್ ಕುಮಾರ್ ಯಾದವ್ ಅವರನ್ನು ಕೂಡಲೇ ಅಮಾನತುಗೊಳಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಎಫ್‌ಐಆರ್ ದಾಖಲಾಗಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.