ರೂರ್ಕೆಲಾ: ಒಡಿಶಾದ ಸುಂದರ್‌ಗಡ್ ಜಿಲ್ಲೆಯ ಕ್ಯಾಥೊಲಿಕ್ ಚರ್ಚ್‌ಗೆ ನುಗ್ಗಿದ ಅಪರಿಚಿತರು ಇಬ್ಬರು ಪಾದ್ರಿಗಳ ಮೇಲೆ ಹಲ್ಲೆ ನಡೆಸಿ, ₹10ಲಕ್ಷ ನಗದು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ರೂರ್ಕೆಲಾ ವಲಯ 3ರ ಉಪವಲಯದ ಪೊಲೀಸ್ ಅಧಿಕಾರಿ ನಿರ್ಮಲ್‌ಚಂದ್ರ ಮೋಹಪಾತ್ರ ಅವರು ಈ ಕುರಿತು ಮಾಹಿತಿ ನೀಡಿದ್ದು, ‘ರೂರ್ಕೆಲಾದಿಂದ 25 ಕಿ.ಮೀ. ದೂರದಲ್ಲಿರುವ ಜರ್ಬಹಾಲ್ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಚರ್ಚ್‌ನ ಪಾದ್ರಿ ಮೇಲೆ ಹಲ್ಲೆ ನಡೆಸಿ, ಹಣವನ್ನು ಲೂಟಿ ಮಾಡಿದ್ದಾರೆ’ ಎಂದಿದ್ದಾರೆ.
ಚರ್ಚ್‌ನ ಮುಖ್ಯ ದ್ವಾರವನ್ನು ಒಡೆದು ಒಳನುಗ್ಗಿದ ಆಗಂತುಕರು ಪಾದ್ರಿಯ ಕೊಠಡಿಗೆ ತೆರಳಿ ಹಲ್ಲೆ ನಡೆಸಿದ್ದಾರೆ. ಇದರಲ್ಲಿ ಪಾದ್ರಿಗಳಾದ ಅಲಾಯ್ಸ್ ಕ್ಸಲೆಕ್ಸೊ (72) ಹಾಗೂ ನಿರಿಯಾಲ್ ಬೈಲುಂಗ್ (52) ಗಾಯಗೊಂಡಿದ್ದಾರೆ. ಇವರನ್ನು ರೂರ್ಕೆಲಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
‘ವಿದ್ಯಾರ್ಥಿ ನಿಲಯ ಹಾಗೂ ಶಾಲೆಗಳಿಂದ ಸಂಗ್ರಹಿಸಿದ ಶುಲ್ಕದ ಮೊತ್ತ ₹10 ಲಕ್ಷ ನಗದು ಚರ್ಚ್‌ನಲ್ಲಿತ್ತು. ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಚರ್ಚ್‌ನ ಮುಂಭಾಗ ಕಬ್ಬಿಣದ ಬಾಗಿಲನ್ನು ಮುರಿದು ಒಳನುಗ್ಗಿ, ಹಲ್ಲೆ ನಡೆಸಿದ ಗುಂಪಿನಲ್ಲಿ 10ರಿಂದ 12 ಜನರಿದ್ದರು. ಅವರು ಲಾಠಿ ಮತ್ತು ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದರು’ ಎಂದು ಕ್ಸಲೆಕ್ಸೊ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.