ನವದೆಹಲಿ: ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ಕುರಿತ ದೂರುಗಳ ವಿವರ ಹಾಗೂ ದೂರುಗಳಿಗೆ ಸಂಬಂಧಿಸಿದಂತೆ ಆಗಿರುವ ಕ್ರಮಗಳ ಬಗ್ಗೆ ಗ್ರಾಹಕರು ಮಾಹಿತಿ ಪಡೆಯಲು ಸಾಧ್ಯವಾಗುವಂತೆ ಡ್ಯಾಶ್‌ಬೋರ್ಡ್ ರೂಪಿಸಬೇಕು ಎಂದು ಕೇಂದ್ರ ಆಯುಷ್ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.
ಕಾನೂನಿಗೆ ವಿರುದ್ಧವಾಗಿ, ತಪ್ಪುದಾರಿಗೆ ಎಳೆಯುವ ಜಾಹೀರಾತುಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಹಾಗೂ ಪ್ರಸಾರವಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದೆ ಗಮನಹರಿಸಿತ್ತು.
ಕೋವಿಡ್ ಲಸಿಕೆ ನೀಡುವ ಅಭಿಯಾನ ಹಾಗೂ ಆಧುನಿಕ ವೈದ್ಯಪದ್ಧತಿಯ ವಿರುದ್ಧ ಪತಂಜಲಿ ಆಯುರ್ವೇದ್ ಲಿಮಿಟೆಡ್ ಕಂಪನಿಯು ತಪ್ಪು ದಾರಿಗೆ ಎಳೆಯುವ ಅಭಿಯಾನ ನಡೆಸಿದೆ ಎಂದು ದೂರಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರು ಇರುವ ವಿಭಾಗೀಯ ಪೀಠವು ನಡೆಸುತ್ತಿದೆ.
ಸ್ವೀಕರಿಸಿದ ದೂರುಗಳ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಸಿಗದೆ ಇರುವುದು ಗ್ರಾಹಕರನ್ನು ಅಸಹಾಯಕರನ್ನಾಗಿಸುತ್ತಿದೆ ಎಂದು ಪೀಠವು ಹೇಳಿತು. ಆಯುಷ್ ಸಚಿವಾಲಯವು ಡ್ಯಾಷ್‌ಬೋರ್ಡ್ ರೂಪಿಸಬೇಕು. ಆಗ ಮಾಹಿತಿ ಸಾರ್ವಜನಿಕರಿಗೆ ಸಿಗುವಂತೆ ಆಗುತ್ತದೆ ಎಂದು ಪೀಠವು ಹೇಳಿತು.
ಗ್ರಾಹಕರ ಕಡೆಯಿಂದ ಸಲ್ಲಿಕೆಯಾಗಿದ್ದ ದೂರುಗಳ ಸಂಖ್ಯೆ ಈ ಹಿಂದೆ ಎರಡೂವರೆ ಸಾವಿರಕ್ಕೂ ಹೆಚ್ಚಿತ್ತು. ಆದರೆ ಈಗ ಅದು 130ಕ್ಕೆ ಇಳಿಕೆಯಾಗಿದೆ. ದೂರುಗಳನ್ನು ಇತ್ಯರ್ಥಪಡಿಸುವ ವ್ಯವಸ್ಥೆಯ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ ಇರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಪೀಠ ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.