ಗೋಂಡ (ಉತ್ತರ ಪ್ರದೇಶ): ಕಾಣೆಯಾಗಿದ್ದ 13 ವರ್ಷದ ಬಾಲಕಿಯ ಮೃತದೇಹವು ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಬೆಂಬಲಿಗರಿಗೆ ಸೇರಿದ ಆಶ್ರಮದ ಬಳಿ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
'ಮೃತ ಬಾಲಕಿ ಬಿಮೌರ್ ಗ್ರಾಮದ ನಿವಾಸಿ. ಗುರುವಾರದಿಂದ ಕಾಣೆಯಾಗಿದ್ದಳು. ಸಂತ್ರಸ್ತೆಯ ಪೋಷಕರು ನೀಡಿದ ದೂರಿಗೆ ಸಂಬಂಧಿಸಿ ತನಿಖೆಗೆ ತಂಡವನ್ನು ನಿಯೋಜಿಸಲಾಗಿದೆ' ಎಂದು ಎಎಸ್‌ಪಿ ಶಿವರಾಜ್ ಪ್ರಜಾಪತಿ ತಿಳಿಸಿದ್ದಾರೆ.
'ಬಹರಾಯಿಚ್ ರಸ್ತೆಯ ಆಶ್ರಮವೊಂದರ ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಬಾಲಕಿ ಶವ ಪತ್ತೆಯಾಗಿದೆ. ಅಸಾರಾಂ ಬಾಪು ಅವರ ಬೆಂಬಲಿಗರು ನಿರ್ಮಿಸಿರುವ ಆಶ್ರಮ ಇದಾಗಿದೆ. ಬಾಲಕಿಯ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆಶ್ರಮದ ಕೆಲವರನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ' ಎಂದು ಶಿವರಾಜ್ ಪ್ರಜಾಪತಿ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಪೊಲೀಸರ ಪ್ರಕಾರ ಮೂರು ವರ್ಷಗಳ ಹಿಂದೆ ಸಂತ್ರಸ್ತೆಯ ತಂದೆ ಅನುಮಾನಸ್ಪದವಾಗಿ ಕಾಣೆಯಾಗಿದ್ದಾರೆ. ಇದುವರೆಗೆ ಅವರುಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವೊಂದರಲ್ಲಿಅಸಾರಾಂ ಬಾಪು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.