ಕಾನ್ಪುರ: ಜಿಮ್ ತರಬೇತುದಾರನೊಬ್ಬ ತನ್ನ ಜತೆ ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಲೆಗೈದು ಶವವನ್ನು ಇಲ್ಲಿನ ಸಿವಿಲ್ ಲೈನ್ಸ್‌ನಲ್ಲಿರುವ ಜಿಲ್ಲಾಧಿಕಾರಿ ಅವರ ನಿವಾಸದ ಬಳಿ ಹೂತಿದ್ದಾನೆ. ಕ್ರೈಮ್ ಥ್ರಿಲ್ಲರ್ ‘ದೃಶ್ಯಂ’ ಸಿನಿಮಾದಿಂದ ಸ್ಫೂರ್ತಿ ಪಡೆದ ಆರೋಪಿ, ಶವವನ್ನು ಹೂಳಲು ಜಿಲ್ಲಾಧಿಕಾರಿ ನಿವಾಸದ ಬಳಿಯ ಜಾಗ ಆಯ್ಕೆ ಮಾಡಿಕೊಂಡಿದ್ದಾನೆ.
ಆದರೆ, ವಿಮಲ್ ಸೋನಿ ಎಂಬಾತ ಎಸಗಿದ ಈ ಕೃತ್ಯ ನಾಲ್ಕು ತಿಂಗಳುಗಳ ಬಳಿಕ ಬಯಲಾಗಿದ್ದು, ಪೊಲೀಸರು ಆತನನ್ನು ಶನಿವಾರ ರಾತ್ರಿ ಬಂಧಿಸಿದ್ದಾರೆ. 32 ವರ್ಷದ ಏಕ್ತಾ ಗುಪ್ತಾ ಅವರನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ವಿಮಲ್ ಒಪ್ಪಿಕೊಂಡಿದ್ದಾನೆ.
‘ತಾನು ಬೇರೊಬ್ಬಳನ್ನು ಮದುವೆಯಾಗುವುದನ್ನು ಏಕ್ತಾ ವಿರೋಧಿಸಿದ್ದಳು. ಅದಕ್ಕೆ ಆಕೆಯನ್ನು ಕೊಲೆಗೈದೆ’ ಎಂದು ಆರೋಪಿ ಹೇಳಿದ್ದಾಗಿ ಡಿಸಿಪಿ ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
‘ಜೂನ್ 24ರಂದು ವಿಮಲ್, ಜಿಮ್‌ಗೆ ಬಂದಿದ್ದ ಏಕ್ತಾಳನ್ನು ತಮ್ಮ ಸಂಬಂಧದ ಬಗ್ಗೆ ಚರ್ಚಿಸುವ ಉದ್ದೇಶದಿಂದ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ವಿಮಲ್, ಏಕ್ತಾಳ ಕುತ್ತಿಗೆಗೆ ಬಲವಾಗಿ ಗುದ್ದಿದ ಕಾರಣ ಆಕೆ ಮೃತಪಟ್ಟಿದ್ದಾಳೆ’ ಎಂದು ಮಾಹಿತಿ ನೀಡಿದ್ದಾರೆ.
‘ದೃಶ್ಯಂ ಚಲನಚಿತ್ರದಿಂದ ಪ್ರೇರಿತನಾದ ವಿಮಲ್, ಶವವನ್ನು ಹೂಳಲು ಜಿಲ್ಲಾಧಿಕಾರಿ ಕ್ಯಾಂಪ್ ಆಫೀಸ್ ಮತ್ತು ನಿವಾಸದ ಬಳಿಯ ಸ್ಥಳ ಆಯ್ಕೆ ಮಾಡಿಕೊಂಡಿದ್ದಾನೆ. ಅಲ್ಲಿ ಹೂತು ಹಾಕಿದರೆ ಶವ ಪತ್ತೆಯಾಗುವ ಸಾಧ್ಯತೆ ಕಡಿಮೆ ಎಂದು ಆತ ನಂಬಿದ್ದ’ ಎಂದು ತಿಳಿಸಿದ್ದಾರೆ.
‘ಪೊಲೀಸರು ಪತ್ತೆಹಚ್ಚುವುದನ್ನು ತಪ್ಪಿಸಲು ಆತ ಈ ಪ್ರದೇಶದ ಸಮೀಪದಲ್ಲಿ ಮೊಬೈಲ್ ಫೋನ್ ಬಳಕೆಯನ್ನೂ ನಿಲ್ಲಿಸಿದ್ದ. ಆದರೂ ಪೊಲೀಸರು ಶವ ಪತ್ತೆಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ’ ಎಂದರು.
ಆರೋಪಿಯು ಏಕ್ತಾಳನ್ನು ಕೊಲೆಗೈದಿದ್ದಾನೆ ಎನ್ನಲಾದ ಸ್ಥಳವು ಜಿಲ್ಲಾಧಿಕಾರಿ ಅವರ ಕ್ಯಾಂಪ್ ಆಫೀಸ್‌ನಿಂದ ಕೆಲವು ಮೀ.ಗಳಷ್ಟು ದೂರದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.