ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಜಮೀನು ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಬೆನ್ನಲ್ಲೇ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ‘ಭಕ್ತರು ನೀಡಿರುವ ದೇಣಿಗೆಯನ್ನು ದುರುಪಯೋಗ ಮಾಡಿಕೊಳ್ಳುವುದು ಭಕ್ತರ ನಂಬಿಕೆಗೆ ಮಾಡಿದ ಅವಮಾನ‘ ಎಂದು ಹೇಳಿದ್ದಾರೆ.
ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, ‘ಕೋಟ್ಯಂತರ ಜನರು ದೇವರ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ದೇವರ ಪಾದಗಳಲ್ಲಿ ತಮ್ಮ ಕಾಣಿಕೆಯನ್ನು ಅರ್ಪಿಸಿದ್ದಾರೆ. ಆ ದೇಣಿಗೆಯ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು ಅನ್ಯಾಯ ಹಾಗೂ ಪಾಪ. ಅಷ್ಟೇ ಅಲ್ಲ, ಭಕ್ತರು ಇಟ್ಟಿರುವ ನಂಬಿಕೆಗೆ ಮಾಡಿದ ಅವಮಾನ‘ ಎಂದು ಹೇಳಿದ್ದಾರೆ.
‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮ ಮಂದಿರ ಆವರಣದಲ್ಲಿರುವ ಒಂದು ತುಂಡು ಭೂಮಿಯನ್ನು ದುಬಾರಿ ಬೆಲೆಗೆ ಖರೀದಿಸಿದ್ದಾರೆ. ಶ್ರೀರಾಮನ ಹೆಸರಲ್ಲಿ ದೇಣಿಗೆ ಸಂಗ್ರಹಿಸುತ್ತಾ, ಈ ರೀತಿ ಹಗರಣ ನಡೆಸುತ್ತಿದ್ದಾರೆ' ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿತ್ತು.
ಇದನ್ನೂ ಓದಿ– ರಾಮಮಂದಿರ: ಜಮೀನು ಖರೀದಿಯಲ್ಲಿ ಭ್ರಷ್ಟಾಚಾರ ಆರೋಪ
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜಮೀನು ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಪವನ್ ಪಾಂಡೆ ಭಾನುವಾರ ಆರೋಪಿಸಿದ್ದರು. ‘₹ 2 ಕೋಟಿ ಬೆಲೆ ಬಾಳುವ ಈ ಜಮೀನನ್ನು ₹ 18.5 ಕೋಟಿಗೆ ಖರೀದಿಸಲಾಗಿದೆ’ ಎಂದು ಅವರು ದೂರಿದ್ದರು. ಈ ಆರೋಪಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಬಲವಾಗಿ ತಳ್ಳಿ ಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.