ಐಜ್ವಾಲ್: ಮಿಜೋರಾಂ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (MNF) ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಜೋರಂ ಪೀಪಲ್ಸ್ ಮೂಮೆಂಟ್ (ZPM) 2023ರ ಚುನಾವಣೆಯಲ್ಲಿ ಪ್ರಚಂಡ ಜಯ ದಾಖಲಿಸಿದೆ.
1987ರಿಂದ ಎಂಎನ್ಎಫ್ ಹಾಗೂ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದವು. ಆದರೆ ಕೆಲವೇ ವರ್ಷಗಳ ಹಿಂದೆ ಸ್ಥಾಪನೆಯಾದ ಜೋರಂ ಪೀಪಲ್ಸ್ ಮೂಮೆಂಟ್ ಮೇಲೆ ಮತದಾರರು ಈ ಬಾರಿ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಒಟ್ಟು 40 ಸ್ಥಾನಗಳ ವಿಧಾನಸಭೆಯಲ್ಲಿ ಪಕ್ಷವು 27 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದಿದೆ.
ಎರಡನೇ ಬಾರಿ ಅಧಿಕಾರದ ಗದ್ದುಗೆ ಏರುವ ನಿರೀಕ್ಷೆ ಹೊಂದಿದ್ದ ಎಂಎನ್‌ಎಫ್‌ಗೆ ಈ ಬಾರಿ ಕೇವಲ ಏಳು ಸ್ಥಾನಗಳು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಗೆದ್ದಿದೆ. ಮತ್ತೊಂದೆಡೆ 2018ರ ಚುನಾವಣೆಗೆ ಹೋಲಿಸಿದಲ್ಲಿ ಬಿಜೆಪಿ ಈ ಬಾರಿ 2 ಸ್ಥಾನದಲ್ಲಿ ಗೆಲುವು ದಾಖಲಿಸಿದೆ. ಕಳೆದಬಾರಿ ಕೇವಲ ಒಂದು ಸ್ಥಾನದಲ್ಲಿ ಗೆದ್ದಿತ್ತು.
ಎಂಎನ್‌ಎಫ್‌ಗೆ ಈ ಬಾರಿ ಸರಣಿ ಆಘಾತಗಳೇ ಎದುರಾದವು. ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಜೋರಂತಂಗಾ ಐಜ್ವಾಲ್ ಪೂರ್ವ–1 ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ಜೆಡ್‌ಪಿಎಂನ ಲಾಲ್ತನ್‌ಸಂಗಾ ಅವರು 2100 ಮತಗಳ ಅಂತರದಿಂದ ಜೋರಂತಂಗಾ ವಿರುದ್ಧ ಗೆಲುವು ದಾಖಲಿಸಿದರು. ಮತ್ತೊಂದೆಡೆ ಉಪಮುಖ್ಯಮಂತ್ರಿ ಟುಯಿಚಾಂಗ್ ಅವರೂ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಇದು ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.
ಜೆಡ್‌ಪಿಎಂ ಅಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಲಾಲ್ದುಹೋಮಾ ಅವರು ಈ ಬಾರಿ ರಾಜ್ಯದಲ್ಲಿ ಬದಲಾವಣೆ ತರುವ ಭರವಸೆಯನ್ನು ಮತದಾರರಿಗೆ ನೀಡಿದ್ದರು.
‘ರಾಜ್ಯ ಉದಯವಾದ 1987ರಿಂದ ಅಧಿಕಾರದಲ್ಲಿರುವ ಎಂಎನ್‌ಎಫ್ ಹಾಗೂ ಕಾಂಗ್ರೆಸ್ ಸರ್ಕಾರಗಳು ಆಡಳಿತ ನಡೆಸಲು ವಿಫಲವಾಗಿವೆ. ಇದರಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ಬದಲಾವಣೆ ಬಯಸಿ ಜೆಡ್‌ಪಿಎಂಗೆ ಮತ ಹಾಕಿದ್ದಾರೆ’ ಎಂದು ಲಾಲ್ಡುಹೊಮಾ ಹೇಳಿದ್ದಾರೆ.
‘ಮಿಜೋರಾಂನ ಯುವಜನತೆ ನಮ್ಮ ಪಕ್ಷದ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಎನ್‌ಡಿಎ ಬೆಂಬಲಿಸಿದ ಎಂಎನ್ಎಫ್ ಅನ್ನು ಅಧಿಕಾರದಿಂದ ಕಿತ್ತೊಗೆದಿದ್ದಾರೆ. ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ರೈಸ್ತರಿಗೆ ಬಿಜೆಪಿ ಅಪಾಯಕಾರಿ ಎಂದೇ ಭಾವಿಸಲಾಗಿದೆ. ಅದರ ಪರಿಣಾಮವಾಗಿ ಈ ದೊಡ್ಡ ಮಟ್ಟದ ಗೆಲುವು ಲಭಿಸಿದೆ. ಜನರ ಆಶೋತ್ತರಗಳನ್ನು ಈಡೇರಿಸಲಾಗುವುದು’ ಎಂದರು.
ಈ ಬಾರಿ ಚುನಾವಣೆಯಲ್ಲಿ ಜೆಡ್‌ಪಿಎಂನಿಂದ ಸ್ಪರ್ಧಿಸಿದ್ದ ಅರ್ಧಕ್ಕೂ ಹೆಚ್ಚು ಸ್ಪರ್ಧಿಗಳು 50 ವರ್ಷಕ್ಕಿಂತ ಕೆಳಗಿನವರು. 2018ರ ಚುನಾವಣೆ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಜೆಡ್‌ಪಿಎಂ, ಆಗ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 2018ರಲ್ಲಿ 8 ಕ್ಷೇತ್ರಗಳನ್ನು ಪಕ್ಷ ಗೆದ್ದಿತ್ತು. ಆ ವರ್ಷದ ಚುನಾವಣೆಯಲ್ಲಿ ಕಾಂಗ್ರೆಸ್ 5 ಸ್ಥಾನಗಳನ್ನು ಗೆದ್ದು ಮೂರನೇ ಸ್ಥಾನಕ್ಕೆ ಕುಸಿದಿತ್ತು.
40 ಕ್ಷೇತ್ರಗಳಿಗೆ 16 ಮಹಿಳೆಯರು ಸೇರಿ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿದ್ದರು. ಎಂಎನ್‌ಎಫ್, ಝಡ್‌ಪಿಎಂ ಹಾಗೂ ಕಾಂಗ್ರೆಸ್ ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಬಿಜೆಪಿ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ನ. 7ರಂದು ಮಿಜೋರಾಂ ವಿಧಾನಸಭೆಗೆ ಮತದಾನ ನಡೆದಿತ್ತು. ಮತದಾನಕ್ಕೆ ಡಿ. 3ರಂದು ಮತ ಎಣಿಕೆ ನಿಗದಿಯಾಗಿತ್ತು. ಆದರೆ ಭಾನುವಾರ ಕ್ರೈಸ್ತರ ಪ್ರಾರ್ಥನಾ ದಿನವಾದ್ದರಿಂದ ಮುಂದೂಡುವಂತೆ ಅಲ್ಲಿನ ನಾಗರಿಕರು, ರಾಜಕೀಯ ಪಕ್ಷಗಳು ಚುನಾವಣಾ ಆಯೋಗವನ್ನು ಕೋರಿದ್ದರು. ಅದನ್ನು ಪರಿಗಣಿಸಿದ್ದ ಆಯೋಗ, ಸೋಮವಾರ ಮತ ಎಣಿಕೆಗೆ ದಿನಾಂಕ ನಿಗದಿಪಡಿಸಿತು.
ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮುಖ್ಯಮಂತ್ರಿ ಜೋರಂತಂಗಾ ಅವರು ರಾಜ್ಯಪಾಲ ಡಾ. ಹರಿಬಾಬು ಕಂಬಂಪತಿ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.