ನವದೆಹಲಿ: ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ಪ್ರಿಯಾ ಅವರನ್ನು ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯ ಬುಧವಾರ ಖುಲಾಸೆ ಮಾಡಿದೆ. ಅಕ್ಬರ್ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ‘ಮೀಟೂ’ ಅಭಿಯಾನದ ಸಂದರ್ಭದಲ್ಲಿ ಪ್ರಿಯಾ ಹೇಳಿದ್ದರು. ಈ ಹೇಳಿಕೆಯ ವಿರುದ್ಧ ಅಕ್ಬರ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಒಬ್ಬ ವ್ಯಕ್ತಿಯ ಜೀವ ಮತ್ತು ಘನತೆಯ ಬೆಲೆ ತೆತ್ತು ಇನ್ನೊಬ್ಬ ವ್ಯಕ್ತಿಯ ಒಳ್ಳೆಯ ಹೆಸರು ಉಳಿಸಿಕೊಳ್ಳುವ ಹಕ್ಕನ್ನು ರಕ್ಷಿಸಲು ಸಾಧ್ಯವಿಲ್ಲ. ತಮ್ಮ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಮಹಿಳೆಯರನ್ನು ಮಾನನಷ್ಟ ದೂರಿನ ಹೆಸರಿನಲ್ಲಿ ಶಿಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ರವೀಂದ್ರ ಕುಮಾರ್ ಪಾಂಡೆ ಅವರು 91 ಪುಟಗಳ ತೀರ್ಪಿನಲ್ಲಿ ಹೇಳಿದ್ದಾರೆ.
ಹಿರಿಯ ಪತ್ರಕರ್ತರೂ ಆಗಿರುವ ಅಕ್ಬರ್ ಅವರಿಗೆ ಈ ತೀರ್ಪು ಬಹುದೊಡ್ಡ ಹಿನ್ನಡೆ ಎಂದು ಹೇಳಲಾಗಿದೆ.
ಪ್ರಿಯಾ ಮತ್ತು ಇತರ ಕೆಲವು ಮಹಿಳೆಯರು ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿದ್ದ ಅಕ್ಬರ್ ಅವರು ಈ ಆರೋಪದಿಂದಾಗಿ 2018ರಲ್ಲಿ ತಮ್ಮ ಹುದ್ದೆಯನ್ನು ತೊರೆದಿದ್ದರು. ವಿವಿಧ ಪತ್ರಿಕೆಗಳ ಸಂಪಾದಕರಾಗಿದ್ದ ಅವಧಿಯಲ್ಲಿ ತಮಗೆ ಅಕ್ಬರ್ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಈ ಮಹಿಳೆಯರು ಆಪಾದಿಸಿದ್ದರು.
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಅದು ಅವರ ಘನತೆ ಮತ್ತು ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ತಮ್ಮ ಮೇಲೆ ಆದ ದೌರ್ಜನ್ಯದ ನೋವು ಮತ್ತು ಅದಕ್ಕೆ ತಳಕು ಹಾಕಿಕೊಂಡಿರುವ ಅವಮಾನವನ್ನು ಅನುಭವಿಸಿದ ಬಳಿಕ,ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯ ಮೇಲೆ ಸಂತ್ರಸ್ತೆಯು ನಡೆಸುವ ದಾಳಿಯು ಅವರ ಸ್ವರಕ್ಷಣೆಯ ಪ್ರತಿಕ್ರಿಯೆ ಆಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ದಶಕಗಳ ಹಿಂದೆ ನಡೆದಿದೆ ಎಂಬ ಘಟನೆಯನ್ನು ಇರಿಸಿಕೊಂಡು ತಮ್ಮ ವರ್ಚಸ್ಸಿಗೆ ಮಸಿ ಬಳಿಯಲು ಆರೋಪ ಮಾಡಲಾಗಿದೆ ಎಂಬ ಅಕ್ಬರ್ ಅವರ ವಾದವನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ. ತಮ್ಮ ನೋವನ್ನು ತಮ್ಮ ಆಯ್ಕೆಯ ಯಾವುದೇ ವೇದಿಕೆಯಲ್ಲಿ ದಶಕಗಳ ಬಳಿಕವೂ ವ್ಯಕ್ತಪಡಿಸಲು ಮಹಿಳೆಗೆ ಹಕ್ಕು ಇದೆ ಎಂದು ನ್ಯಾಯಾಲಯವು ಹೇಳಿದೆ.
ತಾವು ಮತ್ತು ತಮ್ಮ ಹಿರಿಯ ಸಹೋದ್ಯೋಗಿಯಾಗಿದ್ದ ಘಝಲಾ ವಹಾಬ್ ಅವರ ಹೇಳಿಕೆಯ ಆಧಾರದಲ್ಲಿ ನೋಡುವುದಾದರೆ ಅಕ್ಬರ್ ಅವರು ಬಹುದೊಡ್ಡ ವರ್ಚಸ್ಸು ಇರುವ ವ್ಯಕ್ತಿ ಅಲ್ಲ ಎಂಬ ರಮಣಿ ಅವರ ವಾದವನ್ನು ನ್ಯಾಯಾಲಯವು ಒಪ್ಪಿಕೊಂಡಿತು.
‘1993ರ ಡಿಸೆಂಬರ್‌ನ ಒಂದು ದಿನ ಸಂಜೆ ಏಳು ಗಂಟೆಗೆ ಸಂದರ್ಶನಕ್ಕಾಗಿ ನನ್ನನ್ನು ಮುಂಬೈನ ಒಬೆರಾಯ್ ಹೋಟೆಲ್‌ನ ತಮ್ಮ ಕೊಠಡಿಗೆ ಅಕ್ಬರ್ ಅವರು ಕರೆಸಿಕೊಂಡಿದ್ದರು. ಅಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಈ ಬಗೆಗಿನ ವಿವರಗಳಿರುವ ಲೇಖನ ಮತ್ತು ಟ್ವೀಟ್ ಅನ್ನು ಸಾರ್ವಜನಿಕ ಒಳಿತಿಗಾಗಿ ಬಹಿರಂಗಪಡಿಸಿದ್ದೇನೆ’ ಎಂದು ಪ್ರಿಯಾ ಅವರು ವಾದಿಸಿದ್ದರು.
‘ಮಹಿಳೆಯರಿಗೆ ಗೌರವ ಕೊಡಬೇಕು ಎಂಬು ವಿಷಯವನ್ನು ಇರಿಸಿಕೊಂಡು ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳು ರಚನೆಯಾದ ಭಾರತದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನಾಚಿಕೆಗೇಡು’ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಪ್ರಿಯಾ ಅವರಿಗೆ ಯಾವುದೇ ಕಿರುಕುಳ ನೀಡಿಲ್ಲ. ತಮ್ಮನ್ನು ಅವಮಾನಿಸುವ ಉದ್ದೇಶದಿಂದಲೇ ಅವರು ಈ ಆರೋಪಗಳನ್ನು ಮಾಡಿದ್ದಾರೆ ಎಂದು ಅಕ್ಬರ್ ಮಾನನಷ್ಟ ದೂರಿನಲ್ಲಿ ಹೇಳಿದ್ದರು. ಆದರೆ, ಈ ವಾದವನ್ನೂ ನ್ಯಾಯಾಲಯ ಒಪ್ಪಲಿಲ್ಲ. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿರುವವರು ಕೂಡ ಲೈಂಗಿಕ ಕಿರುಕುಳ ನೀಡುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಹೇಳಿದೆ.
ಸಮರ್ಥನೆ ಸಿಕ್ಕಿದೆ: ಪ್ರಿಯಾ
‘ಇದು ಅದ್ಭುತ ಅನುಭವ. ನನ್ನ ನಿಲುವಿಗೆ ಸಮರ್ಥನೆ ದೊರೆತಿದೆ’ ಎಂದು ಪ್ರಿಯಾ ಅವರು ತೀರ್ಪಿನ ಬಳಿಕ ಹೇಳಿದ್ದಾರೆ.
‘ಮಹಿಳೆಯರು ಮನಬಿಚ್ಚಿ ಮಾತನಾಡಲು ಈ ತೀರ್ಪು ಉತ್ತೇಜನ ನೀಡಲಿದೆ. ತಮ್ಮಲ್ಲಿರುವ ಸತ್ಯವನ್ನು ಬಹಿರಂಗ ಮಾಡಿದ ಮಹಿಳೆಯರ ವಿರುದ್ಧ ಪ್ರಭಾವಿ ಪುರುಷರು ದೂರು ನೀಡುವುದನ್ನು ಇದು ತಪ್ಪಿಸಲಿದೆ. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಎಷ್ಟು ಗಮನ ದೊರೆಯಬೇಕೋ ಅಷ್ಟು ಗಮನ ಸಿಕ್ಕಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಿಯಾ ಅವರ ನಿಲುವನ್ನು ಕೋರ್ಟ್ ಒಪ್ಪಿಕೊಂಡಿದೆ. ಅವರು ಹೇಳಿದ್ದು ಸತ್ಯ ಎಂದಿದೆ. ಅವರನ್ನು ನಂಬದೇ ಇರಲು ಕಾರಣವಿಲ್ಲ ಎಂದು ಹೇಳಿದೆ ಎಂದು ಪ್ರಿಯಾ ಪರವಾಗಿ ವಾದಿಸಿದ್ದ ಹಿರಿಯ ವಕೀಲೆ ರೆಬೆಕಾ ಎಂ. ಜಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.