ಮುಂಬೈ: ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಅಜಿತ್ ಪವಾರ್ ವಿರುದ್ಧ ಕಿಡಿಕಾರಿರುವ ಎನ್‌ಸಿಪಿ ಮುಖಂಡ ನವಾಬ್ ಮಲಿಕ್, ಪಕ್ಷವು ಶಾಸಕರ ಹಾಜರಾತಿಗಾಗಿ ಪಡೆದಿದ್ದ ಸಹಿಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
'ಹಾಜರಾತಿಗಾಗಿ ಶಾಸಕರಿಂದ ಪಡೆಯಲಾಗಿದ್ದ ಸಹಿಯನ್ನು ಪ್ರಮಾಣ ವಚನ ಸ್ವೀಕಾರದಲ್ಲಿ ಆಧಾರವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ' ಎಂದು ನವಾಬ್ ಮಲಿಕ್ ವರದಿಗಾರರಿಗೆ ತಿಳಿಸಿದ್ದಾರೆ.
105 ಸ್ಥಾನಗಳನ್ನು ಹೊಂದಿರುವ ಬಿಜೆಪಿಯು 54 ಸ್ಥಾನ ಗಳಿಸಿರುವ ಎನ್‌ಸಿಪಿ ಜತೆಗೆ ಮೈತ್ರಿ ಸರ್ಕಾರ ರಚಿಸಿರುವಂತೆ ಬಿಂಬಿತವಾಗಿದೆ. ಇದೇ ಆಧಾರದ ಮೇಲೆ ಬೆಳಿಗ್ಗೆ ದೇವೇಂದ್ರ ಫಡಣವಿಸ್ ಮುಖ್ಯಮಂತ್ರಿ ಎರಡನೇ ಅವಧಿಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
'ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಅಜಿತ್ ಪವಾರ್ ಬಿಜೆಪಿ ಜತೆಗೆ ಸರ್ಕಾರ ರಚನೆಯಲ್ಲಿ ಕೈಜೋಡಿಸಿರುವುದು ಅವರ ವೈಯಕ್ತಿಕ ಮತ್ತು ಸ್ವಂತ ನಿರ್ಧಾರವಾಗಿದೆ. ಇದು ಪಕ್ಷದ ನಿರ್ಧಾರವಲ್ಲ' ಎಂದು ಎನ್‌ಸಿಪಿ ಮುಖ್ಯಸ್ಥ ಶರಾದ್ ಪವಾರ್ ಸ್ಪಷ್ಟಪಡಿಸಿದರು.
ಶುಕ್ರವಾರ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನಾ ಸರ್ಕಾರ ರಚನೆಯ ಅಂತಿಮ ಹಂತ ತಲುಪಿದ್ದವು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಲು ಒಮ್ಮತ ಸಹ ವ್ಯಕ್ತವಾಗಿತ್ತು. ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಶಿವಸೇನಾ 56 ಹಾಗೂ ಕಾಂಗ್ರೆಸ್ 44 ಸ್ಥಾನಗಳನ್ನು ಹೊಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.