ಪುಣೆ: ಪುಣೆಯಲ್ಲಿ ಇಬ್ಬರು ಯುವ ಟೆಕಿಗಳ ಸಾವಿಗೆ ಕಾರಣವಾದ ಪೋಶೆ ಕಾರು ದುರಂತದಲ್ಲಿ ತನ್ನ ಮಾನಹಾನಿ ಮಾಡದಂತೆ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ಎನ್‌ಸಿಪಿ ಶಾಸಕ ಸುನಿಲ್ ಟಿಂಗ್ರೆ ನೋಟಿಸ್ ಕಳುಹಿಸಿದ್ದಾರೆ.
ಈ ವಿಷಯವನ್ನು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ತಿಳಿಸಿದ್ದು, ‘ತಮ್ಮ ತಂದೆಗೆ ಶಾಸಕ ಟಿಂಗ್ರೆ ನೋಟಿಸ್ ಕಳುಹಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ನಮ್ಮ ತಂದೆ (ಶರದ್ ಪವಾರ್) ಟಿಂಗ್ರೆಗೆ ಟಿಕೆಟ್ ನೀಡಿದ್ದರು. ಈಗ ಅವರು ನೋಟಿಸ್ ಕಳುಹಿಸಿದ್ದಾರೆ. ಪೋಶೆ ಕಾರು ದುರಂತದಲ್ಲಿ ತನ್ನ ಹೆಸರು ಪ್ರಸ್ತಾಪಿಸಿದರೆ ಪವಾರ್ ಅವರನ್ನು ನ್ಯಾಯಾಲಯದ ಕಟಕಟೆಗೆ ಎಳೆಯುವ ಎಚ್ಚರಿಕೆ ನೀಡಿದ್ದಾರೆ’ ಎಂದಿದ್ದಾರೆ.
‘ಜಾರಿ ನಿರ್ದೇಶನಾಲಯದ ನೋಟಿಸ್‌ಗೆ ಹೆದರದ ಪವಾರ್, ಇವರ ಮಾನಹಾನಿ ನೋಟಿಸ್‌ಗೆ ಹೆದರುವರೇ?’ ಎಂದು ಸುಳೆ ಪ್ರಶ್ನಿಸಿದ್ದಾರೆ.
ವಡಗಾಂವ್ ಶೆರಿ ಕ್ಷೇತ್ರದಿಂದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಅಭ್ಯರ್ಥಿಯಾಗಿ ಟಿಂಗ್ರೆ ಸ್ಪರ್ಧಿಸುತ್ತಿದ್ದಾರೆ. ಪುಣೆಯ ಪೋಶೆ ದುರಂತದಲ್ಲಿ ತಮ್ಮ ಪ್ರಭಾವ ಬೀರಿ ಆರೋಪಿಯನ್ನು ರಕ್ಷಿಸುವ ಕೆಲಸ ಮಾಡಿರುವ ಆರೋಪ ಇವರ ಮೇಲಿದೆ.
ಕಳೆದ ಮೇ 19ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಮದ್ಯದ ಅಮಲಿನಲ್ಲಿ ವಿಲಾಸಿ ಪೋಶೆ ಕಾರನ್ನು ವೇಗವಾಗಿ ಚಾಲನೆ ಮಾಡಿದ ಪರಿಣಾಮ ಬೈಕ್ ಡಿಕ್ಕಿಯಾಗಿ ಇಬ್ಬರು ಟೆಕಿಗಳ ಸಾವಿಗೆ ಕಾರಣವಾಗಿದ್ದ ಆರೋಪ 17 ವರ್ಷದ ಬಾಲಕನ ಮೇಲಿದೆ. ಈ ಪ್ರಕರಣ ದೇಶವ್ಯಾಪಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.