ADVERTISEMENT

ಮಣಿಪುರ ಹಿಂಸಾಚಾರ : 10 ಶಾಸಕರಿಂದ ಪ್ರತ್ಯೇಕ ಆಡಳಿತದ ಬೇಡಿಕೆ

ಪಿಟಿಐ
Published 13 ಮೇ 2023, 14:37 IST
Last Updated 13 ಮೇ 2023, 14:37 IST
ಮಣಿಪುರದಲ್ಲಿನ ಹಿಂಸಾಚಾರ ಖಂಡಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಮಣಿಪುರ ರಾಜ್ಯದವರು ಪ್ರತಿಭಟಿಸಿದ ದೃಶ್ಯ –ಪಿಟಿಐ ಚಿತ್ರ
ಮಣಿಪುರದಲ್ಲಿನ ಹಿಂಸಾಚಾರ ಖಂಡಿಸಿ ನವದೆಹಲಿಯ ಜಂತರ್ ಮಂತರ್‌ನಲ್ಲಿ ಮಣಿಪುರ ರಾಜ್ಯದವರು ಪ್ರತಿಭಟಿಸಿದ ದೃಶ್ಯ –ಪಿಟಿಐ ಚಿತ್ರ    

ಐಜ್ವಾಲ್‌ (ಪಿಟಿಐ): ಮಣಿಪುರದಲ್ಲಿ ಹಿಂಸಾಚಾರ ನಡೆದ ಬೆನ್ನಲ್ಲೇ ರಾಜ್ಯದ ಚಿನ್‌–ಕುಕಿ–ಮಿಜೊ–ಜೋಮಿ ಗುಂಪಿಗೆ ಸೇರಿದ 10 ಶಾಸಕರು ತಮ್ಮ ಪ್ರದೇಶಕ್ಕೆ ಪ್ರತ್ಯೇಕ ಆಡಳಿತ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಿಜೆಪಿಯಿಂದ ಗೆದ್ದಿರುವ ಏಳು ಶಾಸಕರ ಜೊತೆಗೆ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಕುಕಿ ಪೀಪಲ್ಸ್‌ ಅಲಯನ್ಸ್‌ನ (ಕೆಪಿಎ) ಇಬ್ಬರು ಹಾಗೂ ಪಕ್ಷೇತರ ಶಾಸಕರೊಬ್ಬರು ಕೇಂದ್ರದ ಮುಂದೆ ಈ ಬೇಡಿಕೆ ಇಟ್ಟಿದ್ದಾರೆ.  

‘ಮಣಿಪುರ ಸರ್ಕಾರವು ನಮ್ಮ ಸಮುದಾಯಕ್ಕೆ ಸೂಕ್ತ ರಕ್ಷಣೆ ಒದಗಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಸಂವಿಧಾನದ ಅಡಿಯಲ್ಲಿ ನಮಗೆ ಪ್ರತ್ಯೇಕ ಆಡಳಿತ ಒದಗಿಸಬೇಕು. ಶಾಂತಿಯುತ ಜೀವನ ನಡೆಸುವುದಕ್ಕೆ ಅನುವು ಮಾಡಿಕೊಡಬೇಕು’ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಬಹುಸಂಖ್ಯಾತ ಮೈತೇಯಿ ಸಮುದಾಯದವರೇ ಹಿಂಸಾಚಾರ ನಡೆಸಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರವು ಪರೋಕ್ಷವಾಗಿ ಬೆಂಬಲ ನೀಡಿದೆ. ನಮಗೆ ಸುರಕ್ಷತೆಯೇ ಇಲ್ಲದಾಗಿದೆ. ಹೀಗಾಗಿ ಪ್ರತ್ಯೇಕ ಸ್ಥಾನಮಾನ ಕಲ್ಪಿಸಿ’ ಎಂದು ಕೋರಿದ್ದಾರೆ.

ಶಾಸಕರಾದ ಹಾವೊಖೋಲೆಟ್‌ ಕಿಪ್‌ಗೊನ್‌, ನಗೂರ್‌ಸಂಗಲುರ್‌ ಸನಾಟೆ, ಕಿಮ್‌ನಿಯೊ ಹಾವೊಕಿಪ್‌ ಹಾಂಗ್‌ಸಿಂಗ್‌, ಲೆಟ್‌ಪಾವೊ ಹಾವೊಕಿಪ್‌, ಎಲ್‌ಎಂ ಖಾವುತೆ, ಲೆತ್‌ಜಮಂಗ್‌ ಹಾವೊಕಿಪ್‌, ಚಿನ್‌ಲುತಾಂಗ್‌, ಪಾವೊಲಿಯೆನ್‌ಲಾಲ್‌ ಹಾವೊಕಿಪ್‌, ನೆಮ್‌ಚಾ ಕಿಪ್‌ಗೆನ್‌ ಮತ್ತು ವುಂಗ್‌ಜಗಿನ್‌ ವಾಲ್ತೆ ಅವರು ಜಂಟಿಯಾಗಿ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ನೆಲೆ ಕಳೆದುಕೊಂಡ ನಾಗರಿಕರು: ಹಿಂಸಾಚಾರದಿಂದ ನಲುಗಿರುವ ರಾಜ್ಯದ ಅನೇಕ ನಾಗರಿಕರು ಈಗ ನೆಲೆಯೇ ಇಲ್ಲದಂತಾಗಿದ್ದಾರೆ. ಗಲಭೆಯಿಂದಾಗಿ ಗುವಾಹಟಿಗೆ ಪ್ರಯಾಣ ಬೆಳೆಸಿರುವ ಅನೇಕರು ಅಲ್ಲಿ ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.

‘ಹಿಂಸಾಚಾರದ ವೇಳೆ ನಮ್ಮ ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಹುಟ್ಟೂರಿಗೆ ಮರಳಬೇಕೆಂದರೆ ಅಲ್ಲಿ ಉಳಿದುಕೊಳ್ಳುವುದಕ್ಕೆ ಈಗ ಮನೆಯೇ ಇಲ್ಲದಂತಾಗಿದೆ’ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.