ಚೆನ್ನೈ: ತಮ್ಮ ಪಕ್ಷದ ಅಭ್ಯರ್ಥಿಗಳು ರಾಜ್ಯದ ಜನರಿಗಾಗಿ ಸೇವೆ ಸಲ್ಲಿಸುವುದಾಗಿ ವಾಗ್ದಾನ ಮಾಡಿರುವುದಾಗಿ ಮಕ್ಕಳ್ ನೀಧಿ ಮಯಂ (ಎಂಎನ್ಎಂ) ಪಕ್ಷದ ಅಧ್ಯಕ್ಷ ಹಾಗೂ ನಟ ಕಮಲ್ ಹಾಸನ್ ಶುಕ್ರವಾರ ಖಚಿತಪಡಿಸಿದ್ದಾರೆ.
ನಮ್ಮ ಅಭ್ಯರ್ಥಿಗಳು ರಾಜ್ಯದ ಜನರಿಗಾಗಿ ಕೆಲಸ ಮಾಡುತ್ತಾರೆ ಎಂದು ಬಾಂಡ್ ನೀಡಿದ್ದಾರೆ. ನಮ್ಮ ಅಭ್ಯರ್ಥಿಗಳು ನಾಯಕರಲ್ಲ, ನಿಮ್ಮ ಸೇವಾಕರ್ತರಾಗಿದ್ದಾರೆ. ಅವರು ನಿಮ್ಮ ಕ್ಷೇತ್ರಕ್ಕೆ ಮಾರ್ಗದರ್ಶಕರಾಗಿದ್ದು, ಏನು ಬದಲಾವಣೆ ಮಾಡಿದ್ದಾರೆಂಬುದನ್ನು ನಿಮ್ಮ ಮುಂದಿಡಲಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾವೈರಸ್ ಸೋಂಕಿಗೆ ಒಳಗಾಗಿರುವ ಪಕ್ಷದ ಅಭ್ಯರ್ಥಿ ಪೊನ್ ರಾಜ್ ಅವರ ಪರವಾಗಿ ಕಮನ್ ಹಾಸನ್, ಚೆನ್ನೈನ ಅಣ್ಣಾ ನಗರ್ ವಿಧಾನಸಭಾ ಕ್ಷೇತ್ರದಲ್ಲಿ ಅರುಮ್‌ಬಕ್ಕಂ ಎಂಎಂಡಿಎ ಕಾಲೊನಿ ಮಾರ್ಕೆಟ್ ವಲಯದಲ್ಲಿ ಪ್ರಚಾರ ನಡೆಸಿದರು.
ಪೊನ್ ರಾಜ್ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೂ ವಿಡಿಯೊ ಕಾನ್ಫೆರನ್ಸ್‌ನಲ್ಲಿ ಭಾಗವಹಿಸಿದ್ದಾರೆ. ಇದು ಡಿಜಿಟಲ್ ಯುಗ. ಎಂಎನ್‌ಎಂ ಕಾಗದ ರಹಿತ ಡಿಜಿಟಲ್ ಪಕ್ಷವಾಗಿದೆ ಎಂದು ಹೇಳಿದ್ದಾರೆ.
ತಮ್ಮ ಪಕ್ಷದ ಪ್ರಣಾಳಿಕೆಯನ್ನು ಇತರೆ ಪಕ್ಷಗಳು ನಕಲು ಮಾಡಿವೆ ಎಂದು ಕಮಲ್ ಹಾಸನ್ ಆರೋಪಿಸಿದ್ದಾರೆ. ಗೃಹಣಿಯರಿಗೆ ವೇತನ ಯೋಜನೆಯನ್ನು ಒಂದೂವರೆ ವರ್ಷದ ಹಿಂದೆಯೇ ನಮ್ಮ ಪಕ್ಷವು ಘೋಷಣೆ ಮಾಡಿತ್ತು. ಅದನ್ನೀಗ ಇತರೆ ಪಕ್ಷಗಳು ಪ್ರಕಟಿಸುತ್ತಿವೆ ಎಂದು ಬೊಟ್ಟು ಮಾಡಿದರು.
ಮಾಹಿತಿ ಹಕ್ಕಿನ ಮೂಲಕ ಶಾಸಕರ ಕೆಲಸದ ಮಾಹಿತಿಯನ್ನು ಪರಿಶೀಲಿಸಬಹುದು. ನಮ್ಮ ಶಾಸಕರು ಎಷ್ಟು ಖರ್ಚು ಮಾಡುತ್ತಾರೆ ಎಂಬುದನ್ನು ನೀವೇ ನೋಡಬಹುದು. ಇದನ್ನು ಬಹಿರಂಗಪಡಿಸಲು ನಾವು ಮುಕ್ತರಾಗಿದ್ದೇವೆ ಎಂದು ತಿಳಿಸಿದ್ದಾರೆ.
ರಾತ್ರಿ ಬೆಳಗಾಗುವುದರೊಳಗೆ ಭ್ರಷ್ಟಾಚಾರ ಹೋಗಲಾಡಿಸಲು ಸಾಧ್ಯವಿಲ್ಲ. ಆದರೆ ಉತ್ತಮ ನಾಯಕತ್ವ ಬಂದಾಗ ಎಲ್ಲವೂ ಧನಾತ್ಮಕವಾಗಿ ಸಂಭವಿಸುತ್ತದೆ. ಭ್ರಷ್ಟಾಚಾರ ಮತ್ತೆ ಉಂಟಾಗಲಾರದು ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ನಮಗೆ ಅವಕಾಶ ನೀಡಿದರೆ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಬಯಸುತ್ತೇನೆ. ನಾವು ನೀಡಿರುವ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.