ADVERTISEMENT

ಒಂದೂ ಸ್ಥಾನ ಗೆಲ್ಲದ ರಾಜ್ ಠಾಕ್ರೆ; ಪಕ್ಷದ ಮಾನ್ಯತೆ, ಚಿಹ್ನೆ ಕಳೆದುಕೊಳ್ಳುವ ಭೀತಿ

ಪಿಟಿಐ
Published 25 ನವೆಂಬರ್ 2024, 10:37 IST
Last Updated 25 ನವೆಂಬರ್ 2024, 10:37 IST
ರಾಜ್ ಠಾಕ್ರೆ
ರಾಜ್ ಠಾಕ್ರೆ   

ಮುಂಬೈ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಪಕ್ಷವು ಒಂದೂ ಸ್ಥಾನ ಗೆಲ್ಲದೆ ಮುಖಭಂಗ ಅನುಭವಿಸಿದೆ. ಇದರ ನಡುವೆ ಪಕ್ಷದ ಮಾನ್ಯತೆ ಮತ್ತು ಚಿಹ್ನೆಯನ್ನು (ರೈಲ್ವೆ ಎಂಜಿನ್) ಕಳೆದುಕೊಳ್ಳುವ ಆತಂಕ ಎದುರಾಗಿದೆ.

ಈ ಬಾರಿ 125 ಕ್ಷೇತ್ರಗಳಲ್ಲಿ ಎಂಎನ್‌ಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ, ರಾಜ್‌ ಠಾಕ್ರೆ ಅವರ ಪುತ್ರ ಅಮಿತ್ ಠಾಕ್ರೆ ಸೇರಿದಂತೆ ಯಾವೊಬ್ಬ ಅಭ್ಯರ್ಥಿಯೂ ಗೆಲುವು ಸಾಧಿಸಿಲ್ಲ.

‘ಎಂಎನ್‌ಎಸ್ ರಾಜಕೀಯ ಪಕ್ಷವಾಗಿ ಮಾನ್ಯತೆ ಮತ್ತು ಚಿಹ್ನೆಯನ್ನು ಉಳಿಸಿಕೊಳ್ಳಲು ಚುನಾವಣಾ ಆಯೋಗದ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ’ ಎಂದು ಮಹಾರಾಷ್ಟ್ರದ ಮಾಜಿ ಶಾಸಕಾಂಗ ಕಾರ್ಯದರ್ಶಿ ಅನಂತ್ ಕಲ್ಸೆ ತಿಳಿಸಿದ್ದಾರೆ.

ADVERTISEMENT

‘ಯಾವುದೇ ಪಕ್ಷ ರಾಜಕೀಯ ಪಕ್ಷದ ಮಾನ್ಯತೆ ಉಳಿಸಿಕೊಳ್ಳಲು ಚುನಾವಣೆಯಲ್ಲಿ ಕನಿಷ್ಠ ಒಂದು ಸ್ಥಾನವನ್ನು ಗೆಲ್ಲಬೇಕು. ಒಟ್ಟು ಮತ ಹಂಚಿಕೆಯಲ್ಲಿ ಶೇ 8ರಷ್ಟು ಮತಗಳನ್ನು ಗಳಿಸಬೇಕು ಅಥವಾ ಶೇ 6ರಷ್ಟು ಮತಗಳೊಂದಿಗೆ ಎರಡು ಸ್ಥಾನಗಳನ್ನು ಗಳಿಸಬೇಕು ಅಥವಾ ಶೇ 3ರಷ್ಟು ಮತಗಳೊಂದಿಗೆ ಮೂರು ಸ್ಥಾನಗಳನ್ನು ಪಡೆಯಬೇಕು. ಈ ಷರತ್ತುಗಳಲ್ಲಿ ಯಾವುದನ್ನೂ ಪೂರೈಸದಿದ್ದರೆ ಚುನಾವಣಾ ಆಯೋಗವು ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸಬಹುದು’ ಎಂದು ಕಲ್ಸೆ ಹೇಳಿದ್ದಾರೆ.

‘ಈ ಬಾರಿಯ ಚುನಾವಣೆಯಲ್ಲಿ ಒಟ್ಟು ಮತಗಳ ಹಂಚಿಕೆಯಲ್ಲಿ ಎಂಎನ್‌ಎಸ್‌ ಪಕ್ಷವು ಶೇ 1.8ರಷ್ಟು ಮತಗಳನ್ನು ಪಡೆದಿದೆ. ಆದರೆ, ಯಾವುದೇ ಸ್ಥಾನವನ್ನು ಗೆಲುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಎಂಎನ್‌ಎಸ್‌ ಪಕ್ಷಕ್ಕೆ ನೋಟಿಸ್ ಕಳುಹಿಸಬಹುದು. ಹಾಗೆಯೇ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸಬಹುದು’ ಎಂದು ಕಲ್ಸೆ ಅಭಿಪ್ರಾಯಪಟ್ಟಿದ್ದಾರೆ.

2009ರಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ ನಂತರ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಎಂಎನ್‌ಎಸ್ ಒಂದೂ ಸ್ಥಾನವನ್ನು ಗೆಲ್ಲಲು ವಿಫಲವಾಗಿದೆ. 2009ರಲ್ಲಿ ನಡೆದ ಚೊಚ್ಚಲ ಚುನಾವಣಾ ಸ್ಪರ್ಧೆಯಲ್ಲಿ ಎಂಎನ್‌ಎಸ್ 13 ಸ್ಥಾನಗಳನ್ನು ಗೆದ್ದಿತ್ತು. 2014 ಮತ್ತು 2019ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ತಲಾ ಒಬ್ಬ ಶಾಸಕರನ್ನು ಹೊಂದಿತ್ತು.

ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ನವೆಂಬರ್‌ 20ರಂದು ಮತದಾನ ನಡೆದಿತ್ತು. ನವೆಂಬರ್‌ 23ರಂದು ಎಣಿಕೆ ನಡೆದಿದ್ದು, ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ 236 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮಹಾವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟವು 49 ಕ್ಷೇತ್ರ ಗೆಲುವು ಸಾಧಿಸಿದೆ.

ಚುನಾವಣಾ ಫಲಿತಾಂಶ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿರುವ ರಾಜ್ ಠಾಕ್ರೆ, ‘ಫಲಿತಾಂಶಗಳನ್ನು ನಂಬಲಾಗುವುದಿಲ್ಲ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.