ADVERTISEMENT

ಉದ್ಧವ್–ರಾಜ್ ಠಾಕ್ರೆ ಕಲಹ: MNS, ಶಿವಸೇನಾ–ಯುಬಿಟಿ ಕಾರ್ಯಕರ್ತರ ಘರ್ಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಆಗಸ್ಟ್ 2024, 2:52 IST
Last Updated 11 ಆಗಸ್ಟ್ 2024, 2:52 IST
<div class="paragraphs"><p>ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ</p></div>

ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ

   

ಪಿಟಿಐ ಚಿತ್ರಗಳು

ಥಾಣೆ: ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಎನ್‌ಎಸ್‌) ಅಧ್ಯಕ್ಷ ರಾಜ್‌ ಠಾಕ್ರೆ ಬೆಂಬಲಿಗರು ಥಾಣೆಯಲ್ಲಿ ಪರಸ್ಪರರ ವಿರುದ್ಧ ಶನಿವಾರ ಘೋಷಣೆಗಳನ್ನು ಕೂಗಿದ್ದಾರೆ. ಇದು ಇಬ್ಬರು ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಇನ್ನಷ್ಟು ಹೆಚ್ಚಿಸಿದೆ.

ADVERTISEMENT

ಶಿವಸೇನಾ (ಉದ್ಧವ್‌ ಬಾಲಾಸಾಹೇಬ್‌ ಠಾಕ್ರೆ) ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಥಾಣೆಯ ರಾಮ್‌ ಗಣೇಶ್‌ ಗಡ್ಕರಿ ರಂಗಯತನ್‌ ಸಭಾಂಗಣಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಂಎನ್‌ಎಸ್‌ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಘರ್ಷಣೆಯಾಗಿದೆ.

ಥಾಣೆ ನಗರವು ಶಿವಸೇನಾ ಪಕ್ಷದ ಮುಖ್ಯಸ್ಥ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಭದ್ರಕೋಟೆಯಾಗಿದೆ. ಈ ಪಕ್ಷದ ಫೈಯರ್‌ಬ್ರಾಂಡ್‌ ಹಾಗೂ ಶಿಂದೆ ಅವರ ಸಲಹೆಗಾರ ಆನಂದ್‌ ದಿಘೆ ಸಹ ಇಲ್ಲಿಯವರೇ.

ಘರ್ಷಣೆಯಾಗಿದ್ದೇಕೆ?
ರಾಜ್ ಠಾಕ್ರೆ ಅವರ ಬೆಂಗಾವಲು ಪಡೆಯನ್ನು ಗುರಿಯಾಗಿಸಿ ಶಿವಸೇನಾ (ಯುಬಿಟಿ) ಕಾರ್ಯಕರ್ತರು ಬೀಡ್‌ ಜಿಲ್ಲೆಯಲ್ಲಿ ಶುಕ್ರವಾರ ಘೋಷಣೆಗಳನ್ನು ಕೂಗಿದ್ದರು. ವೀಳ್ಯದೆಲೆ ಮತ್ತು ಟೊಮೆಟೊಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂಬಂಧ ಶನಿವಾರ ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ರಾಜ್‌ ಠಾಕ್ರೆ, 'ನನ್ನ ದಾರಿಗೆ ಬರಬೇಡಿ. ಅದನ್ನು ಮೀರಿದರೆ, ನೀವು (ಶಿವಸೇನಾ–ಯುಬಿಟಿ) ಯಾವುದೇ ಚುನಾವಣಾ ರ‍್ಯಾಲಿಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಎಂಎನ್‌ಎಸ್‌ ಕಾರ್ಯಕರ್ತರು ಏನು ಮಾಡುತ್ತಾರೆ ಎಂಬುದನ್ನು ನಿಮಗೆ ಊಹಿಸಲೂ ಸಾಧ್ಯವಿಲ್ಲ' ಎಂದು ಎಚ್ಚರಿಕೆ ನೀಡಿದ್ದರು.

ಅದೇದಿನ ಸಂಜೆ ಉದ್ಧವ್‌ ಅವರ ಬೆಂಗಾವಲು ಪಡೆ ಸಭಾಂಗಣಕ್ಕೆ ಬರುತ್ತಿದ್ದಂತೆ, ಎಂಎನ್ಎಸ್ ಕಾರ್ಯಕರ್ತರು ಉದ್ಧವ್‌ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಬಳೆ, ಟೊಮೆಟೊ, ತೆಂಗಿನಕಾಯಿ ಹಾಗೂ ಕೆಸರು ಎರಚಿದ್ದಾರೆ.

ಈ ಘಟನೆ ಬೆನ್ನಲ್ಲೇ ಎಂಎನ್‌ಎಸ್‌ನ ಹಲವು ಮಹಿಳಾ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಮಹಾರಾಷ್ಟ್ರಕ್ಕೆ ಮೀಸಲಾತಿಯ ಅಗತ್ಯವಿಲ್ಲ. ಆದರೆ, ಸರಿಯಾದ ಆರ್ಥಿಕ ಯೋಜನೆಗಳು, ಜನರಿಗೆ ಉದ್ಯೋಗ ನೀಡಬೇಕಿದೆ ಎಂದು ಕೆಲವು ದಿನಗಳ ಹಿಂದೆ ರಾಜ್‌ ಹೇಳಿದ್ದರು. ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಶಿವಸೇನಾ–ಯುಬಿಟಿ ಕಾರ್ಯಕರ್ತರು ರಾಜ್‌ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

'ಗಡ್ಕರಿ ರಂಗಯತನ್‌' ಥಾಣೆಯ ಜನಪ್ರಿಯ ಸಭಾಂಗಣವಾಗಿದೆ. ಇದನ್ನು ಶಿವಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರು ಉದ್ಘಾಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.